ಗೋಣಿಕೊಪ್ಪಲು, ಜೂ. ೧೬: ರೇಣುಕಾಸ್ವಾಮಿ ಕೊಲೆ ಆರೋಪಿ ಯಾಗಿರುವ ಚಿತ್ರನಟ ದರ್ಶನ್‌ಗೆ ಕಠಿಣ ಶಿಕ್ಷೆಯಾಗಬೇಕು. ಕೊಲೆಯಾದ ರೇಣುಕಾಸ್ವಾಮಿಯ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ಒದಗಿಸ ಬೇಕೆಂದು ಆಗ್ರಹಿಸಿ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಮುಂದೆ ಅಖಿಲ ಭಾರತ ವೀರಶೈವ ಮಹಾಸಭಾದ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ಘಟಕಗಳ ಪದಾಧಿಕಾರಿ ಗಳು ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿ ಮೋಹನ್ ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ಎಂ.ಎನ್. ರಾಜೇಶ್ ಮಾತನಾಡಿ, ನಟ ದರ್ಶನ್ ಪ್ರಭಾವಿ ವ್ಯಕ್ತಿಯಾಗಿದ್ದು, ಪೊಲೀಸ್ ಇಲಾಖೆ ಹಾಗೂ ಸರ್ಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯದೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ನೊಂದ ಕುಟುಂಬದ ಜೀವನ ನಿರ್ವಹಣೆಗೆ ಸರ್ಕಾರ ಕೂಡಲೇ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ಘಟಕಗಳ ಉಪಾಧ್ಯಕ್ಷ ಎಸ್.ಎಸ್. ಶ್ರೀಕಂಠಪ್ಪ, ಕಾರ್ಯದರ್ಶಿಗಳಾದ ಎಸ್.ವಿ. ಚಂದ್ರಶೇಖರ್, ಖಜಾಂಜಿ ಡಿ.ಎಸ್. ಲೋಕೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.