ಕಡಂಗ, ಜೂ. ೧೬: ಎಸ್‌ಕೆಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಬ್ರಶ್‌ಅಪ್-೨೦೨೪ ಜಿಲ್ಲಾ ಸಮಿತಿ ಹಾಗೂ ಉಪಸಮಿತಿಗಳ ನಾಯಕರಿಗೆ ತರಬೇತಿ ಕಾರ್ಯಕ್ರಮ ಕುಶಾಲನಗರದ ಬಿಜಿಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಕೆಎಸ್‌ಎಸ್‌ಎಫ್ ಕೊಡಗು ಜಿಲ್ಲಾಧ್ಯಕ್ಷ ಶುಹೈಬ್ ಫೈಝಿ ವಹಿಸಿದ್ದರು. ಕಾರ್ಯಕ್ರಮವನ್ನು ಸಂಘಟನೆಯ ರಾಜ್ಯ ಉಪಾಧ್ಯಕ್ಷ ತಮ್ಲೀಕ್ ದಾರಿಮಿ ಉದ್ಘಾಟಿಸಿದರು. ಮುಖ್ಯ ಭಾಷಣಗಾರರಾಗಿ ರಾಜ್ಯ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ ಆಗಮಿಸಿದ್ದರು. ಪ್ರಸ್ತುತ ಸಾಲಿನಲ್ಲಿ ಎಸ್‌ಕೆಎಸ್‌ಎಸ್‌ಎಫ್ ಶಾಖಾ ಸಮಿತಿಯು ರೋಗಿಗಳಿಗೆ ಸಂಗ್ರಹಿಸುವ ಸಹಾಯ ಧನದಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ ಮೊತ್ತವನ್ನು ಸಂಗ್ರಹಿಸಿದ ಸಿದ್ದಾಪುರ, ನೆಲ್ಲಿಹುದಿಕೇರಿ ಹಾಗೂ ಕೊಡ್ಲಿಪೇಟೆ ಶಾಖೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಧ್ಯಮ ವಿಭಾಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಉನೈಸ್ ಹುಂಡಿ, ಫರ್ಹಾನ್ ನೆಲ್ಲಿಹುದಿಕೇರಿ ಹಾಗೂ ಸಿದ್ದಿಕ್ ಶನಿವಾರಸಂತೆ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಂಸ ಹಾಜಿ, ಅಬ್ದುಲ್ ಮಜೀದ್, ಅಬ್ದುಲ್ಲಾ ಹಾಗೂ ಜಿಲ್ಲಾ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಉಪಸಮಿತಿಗಳ ನಾಯಕರುಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಬಾಖವಿ ಸ್ವಾಗತಿಸಿದರು. ಸಿದ್ದೀಕ್ ವಾಫಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.