ಚೆಟ್ಟಳ್ಳಿ, ಜೂ. ೧೫: ವಿದೇಶಿ ಐಷಾರಾಮಿ ಆಕರ್ಷಕ ಹಣ್ಣುಗಳಾಗಿರುವ ಬಟರ್‌ಫ್ರೂಟ್ ಅಥವಾ ಅವಕಾಡೊ(ಬೆಣ್ಣೆಹಣ್ಣು), ಲಿಚಿ, ರಾಂಬೂಟನ್ ಇತ್ಯಾದಿ ಹಣ್ಣುಗಳನ್ನು ಬೆಳೆಸಿ ಸಂಶೋಧನೆ ನಡೆಸಿ ಇವುಗಳ ಕೃಷಿಯನ್ನು ಕೊಡಗಿನಲ್ಲಿ ಪ್ರಸಿದ್ಧಗೊಳಿಸುವ ನಿಟ್ಟಿನಲ್ಲಿ ‘ಅಧಿಕ ಮೌಲ್ಯದ ವಿದೇಶಿ ಹಣ್ಣುಗಳ ಅಭಿವೃದ್ಧಿ ಸಂಘ’ವನ್ನು ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದ ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ ಕಾರ್ಯಕ್ರಮದ ಸಂದರ್ಭ ಸ್ಥಾಪಿಸಲಾಯಿತು. ಇತರ ಬೆಳೆಗಳಿಗೆ ಆರ್ಥಿಕ ದೃಷ್ಟಿಕೋನದಿಂದ ಹೋಲಿಸಿದರೆ ಹೆಚ್ಚಿನ ಬೆಲೆ ದೊರಕುವ ಈ ವಿಶೇಷ ಹಣ್ಣುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿವೆ. ಸ್ಥಳೀಯರು ಸೇರಿದಂತೆ ಕೊಡಗಿಗೆ ಆಗಮಿಸುವ ಪ್ರವಾಸಿಗರಿಂದಲೂ ಈ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಇಂತಹ ಹಣ್ಣುಗಳ ಕೃಷಿಯ ಸ್ಥಿರವಾದ ಬೆಳವಣಿಗೆಗೆ ಸಹಕರಿಸಲು, ರೈತರಿಗೆ ಈ ಹಣ್ಣುಗಳ ಬೇಸಾಯದ ಬಗ್ಗೆ ಶಿಕ್ಷಣ ನೀಡಲು, ಸಂಶೋಧನೆ ನಡೆಸಿ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಂಘವು ಸಹಕಾರಿಯಾಗಲಿದೆ.

ನೂತನ ಸಂಘದ ಅಧ್ಯಕ್ಷರಾಗಿ ಭಾ.ಕೃ.ಅನು.ಪ.(ತೋಟಗಾರಿಕೆ)-ನವದೆಹಲಿ, ಇದರ ಉಪ ಮಹಾ ನಿರ್ದೇಶಕ ಡಾ.ಎಸ್.ಕೆ ಸಿಂಗ್ ಹಾಗೂ ಉಪಾಧ್ಯಕ್ಷರಾಗಿ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಪ್ರಗತಿಪರ ಬೆಳೆಗಾರರಾದ ಬೋಸ್ ಮಂದಣ್ಣ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಸಂಘದ ವೆಬ್‌ಸೈಟ್‌ಅನ್ನು ಉದ್ಘಾಟಿಸಿದ ಎಸ್.ಕೆ ಸಿಂಗ್ ಅವರು ಸಂಘಕ್ಕೆ ರೂ.೧ ಲಕ್ಷ ೧೦ ಸಾವಿರ ದೇಣಿಗೆ ನೀಡಿದರು. ಸಂಘದ ನಿರ್ದೇಶಕರಾಗಿ ಪೊನ್ನಂಪೇಟೆಯ ಬಿ.ಪಿ. ರವಿಶಂಕರ್ ಹಾಗೂ ಕೆ.ಸಿ. ಅಚ್ಚಯ್ಯ ಅವರನ್ನು ಆಯ್ಕೆ ಮಾಡಲಾಯಿತು.

ಬೆಣ್ಣೆಹಣ್ಣಿನ ಕ್ಷೇತ್ರೋತ್ಸವ - ತಳಿಗಳ ಅಭಿವೃದ್ಧಿ, ಕೀಟ ನಿರ್ವಹಣೆಯ ಬಗ್ಗೆ ತಜ್ಞರ ಸಲಹೆ

ಕೇಂದ್ರದಲ್ಲಿ ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ ಅಂಗವಾಗಿ ನಡೆದ ಸಭೆ, ವಿಚಾರ ಮಂಡನೆ ಕಾರ್ಯಕ್ರಮವನ್ನು ಉದ್ಘಾಟಿಸಿ ೩ಆರನೇ ಪುಟಕ್ಕೆ

ಹೆಚ್ಚಿನ ಸಂಶೋಧನೆ, ಬೇಸಾಯ ಕ್ರಮಗಳ ಜ್ಞಾನ ಅಗತ್ಯ - ವಿಜ್ಞಾನಿ ಪ್ರಭಾಕರ್

ಬೆಣ್ಣೆಹಣ್ಣು ಕೃಷಿಯ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವೆಂದು ಕೆ.ವಿ.ಕೆ ಯ ಮುಖ್ಯ ವಿಜ್ಞಾನಿ ಪ್ರಭಾಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಬೆಣ್ಣೆಹಣ್ಣು ದ್ವೆöÊ ವಾರ್ಷಿಕ ಬೆಳೆ. ಬಿಸಿಲಿನ ಅವಶ್ಯಕತೆ ಇರುವ ಬೆಣ್ಣೆಹಣ್ಣನ್ನು ಕಾಫಿ ಕೃಷಿಯೊಂದಿಗೆ ಹೇಗೆ ಏಕಕಾಲದಲ್ಲಿ ನಿರ್ವಹಣೆ ಮಾಡಬಹುದು, ಕಾಫಿ ಗಿಡಗಳ ಸಂಖ್ಯೆ ಕಡಿಮೆ ಮಾಡಿ ಬೆಣ್ಣೆಹಣ್ಣು ಕೃಷಿ ಹೇಗೆ ಮಾಡಬಹುದು ಎಂಬ ಇತ್ಯಾದಿ ವಿಷಯಗಳ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ ಎಂದರು.

ಇದೀಗ ಮಾರುಕಟ್ಟೆಯಲ್ಲಿರುವ ಬೆಣ್ಣಹಣ್ಣು ವಿವಿಧ ಗಾತ್ರಗಳಲ್ಲಿ ಬರುತ್ತವೆ. ಇವುಗಳ ಗಾತ್ರದಲ್ಲಿನ ಏಕತೆ, ಸ್ವಾದದಲ್ಲಿನ ಸಮಾನತೆ ಇರಬೇಕಾದಲ್ಲಿ ಬೇಸಾಯ ಕ್ರಮಗಳ ಬಗ್ಗೆ ಇದನ್ನು ಬೆಳೆಸುವ ರೈತರಿಗೆ ಜ್ಞಾನವಿರಬೇಕು. ಚೆಟ್ಟಳ್ಳಿ ತೋಟಗಾರಿಕಾ ಕೇಂದ್ರದಲ್ಲಿ ಬೆಣ್ಣೆ ಹಣ್ಣಿನ ವಿವಿಧ ತಳಿಗಳನ್ನು ಸಂಶೋಧಿಸಿ ಬಿಡುಗಡೆಗೊಳಿಸಲಾಗಿದೆ. ಇವುಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ. ಬೇಸಾಯ ಕ್ರಮಗಳ ಬಗ್ಗೆಯೂ ತರಬೇತಿ ನೀಡಲಾಗುವುದು. ಬೆಣ್ಣೆಹಣ್ಣಿನ ಬೆಳೆಯ ಬಗ್ಗೆ ಇನ್ನಷ್ಟು ಸಂಶೋಧನೆ ನಡೆದರೆ ಬೆಳೆಯ ಸ್ಥಿರತೆ, ಆ ಮೂಲಕ ರೈತರ ಆರ್ಥಿಕತೆ ಬೆಳೆಸಬಹುದಾಗಿದ್ದು, ತಾಂತ್ರಿಕ ವಿಚಾರಗಳ ಬಗ್ಗೆ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರವನ್ನು ಕೂಡ ಸಂಪರ್ಕಿಸಿ ತಿಳಿದುಕೊಳ್ಳಬಹುದಾಗಿದೆ ಎಂದು ಅವರು ಸಲಹೆ ಇತ್ತರು

(ಮೊದಲ ಪುಟದಿಂದ) ಮಾತನಾಡಿದ ತೋಟಗಾರಿಕಾ ಸಮಗ್ರ ಅಭಿವೃದ್ಧಿ ಮಿಷನ್‌ನ(ಎಮ್.ಐ.ಡಿ.ಎಚ್) ಪ್ರಮುಖ ಡಾ. ಕೆ.ವರ್ಮ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ವಿವಿಧ ತಳಿಗಳ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದು, ಇವುಗಳ ಸಂಗ್ರಹವು ಕೂಡ ತೋಟಗಾರಿಕಾ ಕೇಂದ್ರದಲ್ಲಿದೆ. ಈ ಮೂಲಕ ಕೇಂದ್ರವು ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಕಾರ್ಯಕ್ರಮಗಳು ಬೆಳೆಗಾರರಿಗೆ ಅನುಕೂಲವಾಗುವುದರ ಜೊತೆಗೆ ಉತ್ತಮ ತಳಿಗಳನ್ನು ವೈಜ್ಞಾನಿಕವಾಗಿ ಬೆಳೆಸಲು ಕೂಡ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಡಾ. ಎಸ್. ಕೆ ಸಿಂಗ್ ಮಾತನಾಡಿ, ವಿದೇಶದಿಂದ ವಿವಿಧ ಹಣ್ಣುಗಳನ್ನು ಆಮದು ಮಾಡಲಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಹಣ್ಣಿನ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಹಣ್ಣಿನ ಬೆಳೆಗಳನ್ನು ಕೇಂದ್ರದಲ್ಲಿ ಬೆಳೆಸಲಾಗುತ್ತದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಬೋಸ್ ಮಂದಣ್ಣ ಮಾತನಾಡಿ, ಈ ಹಿಂದೆ ಹೆಸರುವಾಸಿಯಾಗಿದ್ದ ‘ಕೂರ್ಗ್ ಮ್ಯಾಂಡರಿನ್’ ಎಂಬ ಕೊಡಗಿನ ಕಿತ್ತಳೆ ತಳಿ ಇಂದು ಮರೆಯಾಗಿದ್ದು, ತೋಟಗಾರಿಕಾ ಕೇಂದ್ರದ ಮೂಲಕ ಇದನ್ನು ಅಭಿವೃದ್ಧಿಪಡಿಸುವ ಕಾರ್ಯ ಆಗಬೇಕಿದೆ. ವಿವಿಧ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಕೊಡಗಿನ ವಾತಾವರಣ ಸೂಕ್ತವಾಗಿದೆ. ಕೊಡಗಿನ ‘ಆಫ್-ಸೀಸನ್’ ಲಿಚಿ ಹಣ್ಣು ಆದಾಯದ ಮೂಲವಾಗಿದೆ ಎಂದರು.

ಕೇAದ್ರೀಯ ತೋಟಗಾರಿಕಾ ಇಲಾಖೆಯ ಯೋಜನಾ ಸಂಯೋಜಕ ಡಾ. ಪ್ರಕಾಶ್ ಪಾಟಿಕ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಣ್ಣೆಹಣ್ಣು ಉತ್ತಮ ಆದಾಯದ ಮೂಲವಾಗಿದೆ. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಬೆಣ್ಣೆಹಣ್ಣಿನ ವಿವಿಧ ತಳಿಗಳ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಡಾ. ಕೆಎನ್.ವರ್ಮ, ಎಸ್.ಕೆ. ಸಿಂಗ್, ಡಾ.ಪ್ರಕಾಶ್ ಪಾಟಿಲ್, ಬೋಸ್ ಮಂದಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೇಂದ್ರದ ಮುಖ್ಯಸ್ಥರಾದ ಡಾ. ರಾಜೇಂದ್ರನ್ ಸ್ವಾಗತಿಸಿ, ಕೇಂದ್ರದ ವಿಜ್ಞಾನಿ ಡಾ. ಮುರಳೀದರ್ ವಂದಿಸಿದರು. ಕೃಷಿ ವಿಜ್ಞಾನಿ ಎ.ಟಿ. ರಾಣಿ ಕಾರ್ಯಕ್ರಮ ನಿರೂಪಿಸಿದರು.

‘ಭಾರತದಲ್ಲಿ ಬೆಣ್ಣೆ ಹಣ್ಣಿನ ಕೃಷಿ- ನಿರೀಕ್ಷೆಗಳು ಹಾಗೂ ಸಮಸ್ಯೆಗಳು’ ವಿಷಯದ ಬಗ್ಗೆ ಕೇಂದ್ರದ ಹಣ್ಣು ವಿಜ್ಞಾನಿ ಡಾ. ಮುರುಳೀದರ್ ಬಿ.ಎಂ ಹಾಗು ‘ಬೆಣ್ಣೆ ಹಣ್ಣಿನಲ್ಲಿ ಪ್ರಮುಖ ಕೀಟ ಮತ್ತು ರೋಗಗಳು ಹಾಗೂ ಅವುಗಳ ನಿರ್ವಹಣೆ’ ವಿಷಯದ ಬಗ್ಗೆ ಕೀಟ ವಿಜ್ಞಾನಿ ಡಾ. ರಾಣಿ ಎ.ಟಿ ಮಾಹಿತಿ ನೀಡಿದರು. ನಂತರ ರೈತರು ಹಾಗೂ ವಿಜ್ಞಾನಿಗಳ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು. ಕೇಂದ್ರದಲ್ಲಿ ಬೆಳೆಯಲಾದ ಬಟರ್‌ಫ್ರೂಟ್ ಹಣ್ಣಿನ ವೀಕ್ಷಣೆಯಲ್ಲಿ ಪ್ರಮುಖರು ಹಾಗೂ ವಿಚಾರ ಮಂಡನೆಗೆ ಆಗಮಿಸಿದ್ದ ರೈತರು ಭಾಗಿಯಾದರು.

ಬಹುಮಾನ ವಿತರಣೆ

ಪ್ರದರ್ಶನಕ್ಕೆ ಇಡಲಾದ ಬೆಣ್ಣೆಹಣ್ಣಿನ ವಿವಿಧ ತಳಿಗಳಲ್ಲಿ ಉತ್ತಮ ತಳಿ ಹಾಗೂ ಬೆಣ್ಣೆಹಣ್ಣಿನ ವಿವಿಧ ಖಾದ್ಯಗಳಿಗೆ ಪ್ರಥಮ ರೂ.೩,೦೦೦, ದ್ವಿತೀಯ ರೂ.೨,೦೦೦ ಹಾಗು ತೃತೀಯ ರೂ.೧,೦೦೦ ಬಹುಮಾನ ನೀಡಲಾಯಿತು.

ಬೆಣ್ಣೆಹಣ್ಣಿನ ತಳಿ ವಿಭಾಗದಲ್ಲಿ ಪ್ರಥಮ ಚೋವಂಡ ವಿಷ್ಣು ಪೊನ್ನಣ್ಣ, ದ್ವಿತೀಯ ದೇಚು ಹಾಗೂ ತೃತೀಯ ಬಹುಮಾನವನ್ನು ಸೋಮಯ್ಯ ಅವರು ಪಡೆದುಕೊಂಡರು. ಬೆಣ್ಣೆಹಣ್ಣಿನ ಖಾದ್ಯಗಳ ತಯಾರಿ ವಿಭಾಗದಲ್ಲಿ ಪ್ರಥಮ ರಶ್ಮಿ ಭಾನುಪ್ರಕಾಶ್ , ದ್ವಿತೀಯ ಅಕ್ಷಿತಾ ಹೆಚ್.ಜೆ. ಹಾಗು ತೃತೀಯ ಲಿಜಿನಾ. ಎ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ ಕಾಫಿ ಮಂಡಳಿ, ಅಪ್ಪಂಗಳ ಸಂಬಾರ ಮಂಡಳಿಯ ಪ್ರಮುಖರು ಹಾಗೂ ೨೫೦ಕ್ಕೂ ಅಧಿಕ ಬೆಳೆಗಾರರು ಭಾಗವಹಿಸಿದ್ದರು.

-ಪುತ್ತರಿರ ಕರುಣ್ ಕಾಳಯ್ಯ