ಮಡಿಕೇರಿ, ಜೂ. ೧೧: ರಾಜ್ಯದಲ್ಲಿ ಕಳೆದ ವರ್ಷ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿರುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಇದೀಗ ಒಂದು ವರ್ಷ ಪೂರ್ಣಗೊಂಡಿದೆ.
೨೦೨೩ರ ಜೂನ್ ೧೧ ರಿಂದ ಈ ಯೋಜನೆ ರಾಜ್ಯಾದ್ಯಂತ ಜಾರಿಗೆ ತರಲಾಗಿತ್ತು. ಶಕ್ತಿ ಯೋಜನೆ ಜಾರಿ ಬಳಿಕ ಕೊಡಗಿನಲ್ಲಿ ಈ ತನಕ ೫೫,೯೬,೭೮೪ ಪ್ರಯಾಣಿಕರು ಈ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಪುತ್ತೂರು ವಿಭಾಗೀಯ ಕಚೇರಿ ಅಧೀನದಲ್ಲಿ ಮಡಿಕೇರಿ ಘಟಕ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು ೧೦೬ ವಾಹನಗಳು ೯೭ ಮಾರ್ಗಗಳಲ್ಲಿ ಕೊಡಗಿನಲ್ಲಿ ಕಾರ್ಯಾಚರಿಸುತ್ತಿದೆ. ಇದರಲ್ಲಿ ೭ ರಾಜಹಂಸ ಹಾಗೂ ೭ ಅಂತರರಾಜ್ಯ ಬಸ್‌ಗಳಿದ್ದು, ಈ ಬಸ್‌ಗಳಲ್ಲಿ ಉಚಿತ ಪ್ರಯಾಣವಿಲ್ಲ. ಉಳಿದಂತೆ ೯೨ ಮಾರ್ಗಗಳಲ್ಲಿನ ಒಂದು ವರ್ಷದ ಕಾರ್ಯಾ ಚರಣೆಯಲ್ಲಿ ಇಂದಿನ ತನಕ (ಜೂ೧೧) ಒಟ್ಟು ೫೨,೯೬,೭೮೪ ಮಹಿಳಾ ಪ್ರಯಾಣಿಕರು
(ಮೊದಲ ಪುಟದಿಂದ) ಪ್ರಯಾಣಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದಿದ್ದಾರೆ.
ಇದರಿಂದಾಗಿ ಕೆಎಸ್‌ಆರ್‌ಟಿಸಿಗೆ ಸರಕಾರದ ಮೂಲಕ ಬರುವ ಆದಾಯ ರೂ. ೨೨ ಕೋಟಿ, ೨೭ ಲಕ್ಷ, ೮೨ ಸಾವಿರದ ೪೩ ರಷ್ಟಾಗಿದೆ ಎಂದು ಮಡಿಕೇರಿ ಘಟಕದ ವ್ಯವಸ್ಥಾಪಕ ಹೆಚ್.ಇ. ವೀರಭದ್ರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ. ಇನ್ನು ಶಕ್ತಿ ಯೋಜನೆಯ ಬಗ್ಗೆ ಕೆಲವು ಮಹಿಳೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದು ಈ ರೀತಿಯಿದೆ.
ಕೂಡುಮಂಗಳೂರಿನ ಪವಿತ್ರ ಅವರು ಅನಿಸಿಕೆ ವ್ಯಕ್ತಪಡಿಸಿ ಯೋಜನೆಯೇನೋ ಒಳ್ಳೆಯದ್ದಿದೆ. ಆದರೆ ಇಂದರಿAದಾಗಿ ಇತರ ಜನರಿಗೆ ತೊಂದರೆಯಾಗಬಾರದು. ಹಣ ಹೊಂದಾಣಿಕೆಗೆ ಇತರ ವಸ್ತುಗಳ ಬೆಲೆ ಅಥವಾ ತೆರಿಗೆ ಹೆಚ್ಚಿಸಬಾರದು ಎಂದರು. ಕೂಡಿಗೆಯ ಸುಮತಿ ಅವರು ಮಾತನಾಡಿ, ಬಸ್‌ಗಳಲ್ಲಿ ಪ್ರಸ್ತುತ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಇತರರು ಗೌರವದಿಂದ ಕಾಣುತ್ತಿಲ್ಲ. ಹಿಂದೆ ಹಿರಿಯ ಮಹಿಳೆಯರಿಗೆ ಆಸನವನ್ನು ಬಿಟ್ಟು ಕೊಡುತ್ತಿದ್ದ ಪುರುಷರು ಯುವಕರು ಇದೀಗ ಗಣನೆಗೇ ತೆಗೆದುಕೊಳ್ಳದಂತಾಗಿದೆ ಎಂದು ತಮ್ಮ ಅನುಭವ ಹೇಳಿಕೊಂಡರು.
ಮದಲಾಪುರದ ರತಿ ಅವರು ಉಚಿತ ಪ್ರಯಾಣ ಎಂಬ ಕಾರಣದಿಂದ ಹಲವಾರು ಭಾಗಗಳಲ್ಲಿ ಮಹಿಳೆಯರ ಓಡಾಟ ಭಾರೀ ಹೆಚ್ಚಳವಾಗಿದೆ. ಆದರೆ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚು ಉಪಯೋಗವಾಗುತ್ತಿಲ್ಲ. ಯೋಜನೆ ಜಾರಿ ಬಳಿಕ ಇತರ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದರು.