ಸೋಮವಾರಪೇಟೆ,ಜೂ.೧೦: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿಗರು, ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ ೧೨ ವೈದ್ಯರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಇಲ್ಲಿಂದ ಎಲ್ಲರನ್ನೂ ವರ್ಗಾವಣೆ ಮಾಡಿದ್ದು, ಇದೀಗ ಓರ್ವ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗವಾಗಿರುವ ಸೋಮವಾರಪೇಟೆಯಲ್ಲಿ ರೈತರು, ಬಡ ಕೂಲಿ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಸಣ್ಣಪುಟ್ಟ ಖಾಯಿಲೆಗಳು ಬಂದರೂ ಸಹ ಇಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಇರುವ ಓರ್ವ ವೈದ್ಯರು ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಬರುವ ಬಹುಪಾಲು ರೋಗಿಗಳನ್ನು ಮಡಿಕೇರಿ, ಮೈಸೂರು, ಮಂಗಳೂರಿಗೆ ಶಿಫಾರಸ್ಸು ಮಾಡುತ್ತಿದ್ದಾರೆ. ಇದರಿಂದಾಗಿ ಬಡ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸ್ಥಳೀಯ ಶಾಸಕರು, ಕಾಂಗ್ರೆಸ್ ಸರ್ಕಾರ ವೈದ್ಯರ ಭರ್ತಿಗೆ ಕ್ರಮ ವಹಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ೧೨ ಮಂದಿ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇರುವ ಅನುಕೂಲತೆಗಳನ್ನು ಬಳಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ಬಹುತೇಕ ವೈದ್ಯರನ್ನು ವರ್ಗಾಯಿಸಲಾಗಿದೆ. ನಂತರ ಇಲ್ಲಿಗೆ ನಿಯೋಜನೆ ಮಾಡುವುದನ್ನೇ ಮರೆತಿದೆ. ಇಂತಹ ಜನವಿರೋಧಿ ಸರ್ಕಾರವನ್ನು ಈವರೆಗೆ ನೋಡಿಲ್ಲ ಎಂದರು.

(ಮೊದಲ ಪುಟದಿಂದ) ಪ್ರತಿನಿತ್ಯ ಕನಿಷ್ಟ ೨೦೦ ಮಂದಿ ಹೊರರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಾರೆ. ೧೨ ಜನ ವೈದ್ಯರು ಸರ್ಕಾರಿ ನಿಯಮದಂತೆ ಇರಬೇಕು. ಆದರೆ ಓರ್ವರು ಮಾತ್ರ ಇದ್ದಾರೆ. ಸ್ವತಃ ವೈದ್ಯರೇ ಆಗಿರುವ ಶಾಸಕರಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅವರಿಗೆ ಜನರ ಸಮಸ್ಯೆ ಕಣ್ಣಿಗೆ ಕಾಣಿಸುತ್ತಿಲ್ಲವೇ? ಕಿವಿಗೆ ಇನ್ನೂ ಬಿದ್ದಿಲ್ಲವೇ? ಅಥವಾ ಸಾರ್ವಜನಿಕ ಸಂಪರ್ಕವೇ ಇಲ್ಲವೇ? ಎಂಬ ಸಂಶಯ ಕಾಡುತ್ತಿದೆ ಎಂದು ಟೀಕಿಸಿದರು.

ತಾಲೂಕು ಕೇಂದ್ರದ ಆಸ್ಪತ್ರೆಯ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಈಗಿನ ಶಾಸಕರೂ ಸಹ ಬಡವರ ಆರೋಗ್ಯದ ಬಗ್ಗೆ ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಸಣ್ಣಪುಟ್ಟ ಖಾಯಿಲೆಗೂ ಆಸ್ಪತ್ರೆಗೆ ಬರುವ ರೋಗಿಗಳನ್ನು ಬೇರೆಡೆಗೆ ಕಳುಹಿಸಲಾಗುತ್ತಿದೆ. ಬಡ ರೋಗಿಗಳು ದೂರದ ಆಸ್ಪತ್ರೆಗೆ ತೆರಳಲಾಗದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಸೋಮವಾರಪೇಟೆ ವ್ಯಾಪ್ತಿಯ ರೋಗಿಗಳ ಪರಿಸ್ಥಿತಿ ಏನಾಗಬೇಕು ಎಂದು ಮೇದಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇದು ಸಾಂಕೇತಿಕ ಪ್ರತಿಭಟನೆಯಷ್ಟೇ. ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಇನ್ನಷ್ಟು ಉಗ್ರ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿದ ಅವರು, ಓರ್ವ ವೈದ್ಯರಿಗೆ ಕೇವಲ ೭೫ ಸಾವಿರ ಸಂಬಳ ಕೊಡಲೂ ಸಹ ಸರ್ಕಾರದಲ್ಲಿ ದುಡ್ಡಿಲ್ಲ. ಇಂತಹ ಗತಿ ಗೆಟ್ಟ ಸರ್ಕಾರವನ್ನು ಈವರೆಗೆ ನೋಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಮಂಡಲ ಅಧ್ಯಕ್ಷ ಗೌತಮ್ ಮಾತನಾಡಿ, ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಗಮನ ಹರಿಸಬೇಕು. ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಆಗ್ರಹಿಸಿದರು. ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ತಾಲೂಕು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಾಜಿ ಅಧ್ಯಕ್ಷ ದರ್ಶನ್ ಜೋಯಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಪಕ್ಷದ ಮುಖಂಡರುಗಳಾದ ಮನು ರೈ, ಲೋಕೇಶ್ವರಿ ಗೋಪಾಲ್, ಶ್ರೀನಿಧಿ ಲಿಂಗಪ್ಪ, ಧರ್ಮಪ್ಪ, ಶರತ್‌ಚಂದ್ರ, ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಎಸ್.ಪಿ. ಪೊನ್ನಪ್ಪ, ತಂಗಮ್ಮ, ಮೋಹಿನಿ, ಸುಮಾ ಸುದೀಪ್, ಇಂದಿರಾ ಮೋಣಪ್ಪ, ಜೀವನ್, ರಾಮಕೃಷ್ಣ, ಶಾಂತಳ್ಳಿ ರವಿ ಸೇರಿದಂತೆ ಇತರರು ಭಾಗವಹಿಸಿದ್ದರು.