ಸಿದ್ದಾಪುರ, ಜೂ. ೫: ನೆಲ್ಯಹುದಿಕೇರಿ ಗ್ರಾಮದ ಶಾಲೆ ರಸ್ತೆಯಲ್ಲಿ ಕಾಡಾನೆಯೊಂದು ವಸತಿ ಪ್ರದೇಶಗಳಲ್ಲಿ ಸುತ್ತಾಡಿ ದಾಂಧಲೆ ನಡೆಸಿ ತೆಂಗು ಹಾಗೂ ಬಾಳೆ ಗಿಡಗಳನ್ನು ನಾಶಗೊಳಿಸಿರುವ ಘಟನೆ ನಡೆದಿದೆ. ನೆಲ್ಯ ಹುದಿಕೇರಿ ಗ್ರಾಮದ ಸರ್ಕಾರಿ ಶಾಲೆಯ ಸಮೀಪ ವಾಸವಿರುವ ಶಂಕರ್‌ನಾರಾಯಣ ಭಟ್ ಅವರ ಮನೆಯ ಬಳಿ ಕಾಡಾನೆ ಬೆಳಗ್ಗಿನ ಜಾವ ಲಗ್ಗೆ ಇಟ್ಟು ಮನೆಯ ಬಳಿ ಇದ್ದ ತೆಂಗಿನ ಮರ ಹಾಗೂ ಬಾಳೆ ಗಿಡಗಳನ್ನು ತುಳಿದು ಧ್ವಂಸಗೊಳಿಸಿದೆ. ಕಾಡಾನೆ ಉಪಟಳದಿಂದಾಗಿ ಈ ಭಾಗದ ನಿವಾಸಿಗಳು ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.