ಸಿದ್ದಾಪುರ, ಮೇ ೧೫: ಮಾನವನ ಮೇಲೆ ಧಾಳಿ ನಡೆಸಿ ಹತ್ಯೆ ಮಾಡುತ್ತಿದ್ದ ಪುಂಡಾನೆಯೊAದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖಾಧಿ ಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬಾಡಗ ಬಾಣಂಗಾಲ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಹಾಗೂ ಮಾನವನ ಮೇಲೆ ಧಾಳಿ ನಡೆಸಿ ಹತ್ಯೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ದಕ್ಷ ಎಂಬ ೨೬ ವರ್ಷ ಪ್ರಾಯದ ಸಲಗವನ್ನು ಕಳೆದೆರಡು ದಿನಗಳಿಂದ ಕಾರ್ಯಾಚರಣೆ ನಡೆಸಿ ಬುಧವಾರ ಸೆರೆ ಹಿಡಿದು ನಾಗರಹೊಳೆ ಅರಣ್ಯಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಡಲಾಯಿತು.

ಮತ್ತಿಗೋಡು ಹಾಗೂ ದುಬಾರೆ ಸಾಕಾನೆಗಳಾದ ಅಭಿಮನ್ಯು, ಹರ್ಷ, ಧನಂಜಯ, ಮಹೇಂದ್ರ, ಭೀಮಾ, ಅಶ್ವತ್ಥಾಮ ಇವುಗಳ ಸಹಕಾರದಿಂದ ಮಂಗಳವಾರದAದು ಬಾಡಗ ಬಾಣಂಗಾಲ ಗ್ರಾಮದ ಮಠ ಭಾಗದಲ್ಲಿ ಹಾಗೂ ಬಾಣಂಗಾಲ ಗ್ರಾಮದಲ್ಲಿ ಈ ಸಲಗವನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಯಿತು. ಆದರೆ ಕಾಡಾನೆಯು ಕಾರ್ಯಾಚರಣೆ ತಂಡವನ್ನು ದಿಕ್ಕು ತಪ್ಪಿಸುತ್ತಾ ಬಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡುತ್ತಿತ್ತು. ಬಳಿಕ ಮಂಗಳವಾರ ಸಂಜೆ ಕಾರ್ಯಾ ಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಬುಧವಾರ ಬೆಳಿಗ್ಗೆ ಸಾಕಾನೆಗಳ ನೆರವಿನೊಂದಿಗೆ ವೀರಾಜಪೇಟೆ ತಾಲೂಕು ಡಿ.ಸಿ.ಎಫ್. ಜಗನ್ನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ತಂಡವು ಪುಂಡಾನೆಯ ಚಲನವಲನವನ್ನು ಕಂಡು ಹಿಡಿಯಲು ಮುಂದಾದಾಗ ಸಲಗವು ಸಿದ್ದಾಪುರ ಸಮೀಪದ ಎಮ್ಮೆಗುಂಡಿ ಎಸ್ಟೇಟ್‌ನಲ್ಲಿ ಕಂಡು ಬಂತು. ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಯಾಚರಣೆಯ ತಂಡ ಹಾಗೂ ಸಾಕಾನೆಗಳು ಸಲಗದ ಸೆರೆಗೆ ಮುಂದಾದರು. ಆದರೆ ಪುಂಡಾನೆಯು ಸಾಕಾನೆಗಳನ್ನು ಕಂಡು ಎಮ್ಮೆಗುಂಡಿ ತೋಟದಿಂದ ಪಲಾಯನ ಮಾಡಿ ಸಿದ್ದಾಪುರದ ಕರಡಿಗೋಡು ಗ್ರಾಮದ ಶಿಲ್ಪಿ ತೋಟದ ಮುಖಾಂತರ ಕರಡಿಗೋಡು ಗ್ರಾಮದ ಚಿಕ್ಕನಳ್ಳಿ ಭಾಗಕ್ಕೆ ತಲುಪಿತು. ಈ ವಿಚಾರ ತಿಳಿದ ಕಾರ್ಯಾಚರಣೆ ತಂಡವು ಸಲಗವನ್ನು ಹೇಗಾದರೂ

(ಮೊದಲ ಪುಟದಿಂದ) ಮಾಡಿ ಸೆರೆ ಹಿಡಿಯಬೇಕೆಂದು ಅದನ್ನು ಬೆನ್ನಟ್ಟಿ ಬಂದು ಕರಡಿಗೋಡಿಗೆ ತಲುಪಿತು. ಮಧ್ಯಾಹ್ನ ಅಂದಾಜು ೧ ಗಂಟೆಯ ಸಮಯಕ್ಕೆ ಪುಂಡಾನೆ ಕರಡಿಗೋಡಿನ ಚಿಕ್ಕಿನಳ್ಳಿಯಲ್ಲಿ ಕಂಡು ಬಂತು. ಕೂಡಲೇ ಅದನ್ನು ಸಾಕಾನೆಗಳು ಸುತ್ತುವರಿದವು. ಅರವಳಿಕೆಯ ಔಷಧಿಯನ್ನು ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ. ರಮೇಶ್, ಡಾ. ಚಿಟ್ಟಿಯಪ್ಪ ಕೋವಿಗೆ ತುಂಬಿಸಿದರು. ಶಾರ್ಪ್ ಶೂಟರ್ ಕನ್ನಂಡ ರಂಜನ್ ಅವರು ಅರವಳಿಕೆ ಚುಚ್ಚುಮದ್ದನ್ನು ಸಲಗಕ್ಕೆ ಪ್ರಯೋಗಿಸಿದರು. ಅರವಳಿಕೆ ಔಷಧಿ ತಗಲಿದ ಕೂಡಲೇ ಸಲಗವು ಸುಮಾರು ದೂರದವರೆಗೆ ಓಡಿ ನಂತರ ಚಿಕ್ಕಿನಳ್ಳಿಯ ವಂಡಪಾರ ಕಾಫಿ ತೋಟದಲ್ಲಿ ನೆಲಕ್ಕೆ ಬಿತ್ತು.

ಕೂಡಲೇ ಕಾರ್ಯಾಚರಣೆಯ ತಂಡದವರು ಸಾಕಾನೆಗಳ ನೆರವಿನಿಂದ ಅದರ ಕಾಲಿಗೆ ದೊಡ್ಡ ಗಾತ್ರದ ಹಗ್ಗಗಳನ್ನು ಬಲವಾಗಿ ಕಟ್ಟಿದರು. ನಂತರ ನೆಲಕ್ಕೆ ಉರುಳಿದ್ದ ಸಲಗದ ತಲೆಗೆ ನೀರು ಸುರಿದರು. ಬಳಿಕ ಕರಡಿಗೋಡಿನ ಚಿಕ್ಕನಳ್ಳಿಯಿಂದ ಅವರೆಗುಂದದ ಅರಣ್ಯ ಪ್ರದೇಶದ ಮುಖಾಂತರ ಆರು ಸಾಕಾನೆಗಳ ನೆರವಿನಿಂದ ಮುಖ್ಯರಸ್ತೆಗೆ ಕರೆತರಲಾಯಿತು. ಲಾರಿಯ ಬಳಿ ತರುವಷ್ಟರಲ್ಲಿ ಸಲಗವು ದಾರಿ ಮಧ್ಯೆ ಕುಳಿತುಕೊಂಡು ಲಾರಿಯ ಬಳಿ ಬರಲು ನಿರಾಕರಿಸಿತು. ನಂತರ ಸಾಕಾನೆಗಳ ನೆರವಿನಿಂದ ಸಲಗಕ್ಕೆ ಕಾರ್ಯಾಚರಣೆಯ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖಾಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿ ಲಾರಿಗೆ ಹತ್ತಿಸಲಾಯಿತು. ಭೀಮಾ ಹಾಗೂ ಮಹೇಂದ್ರ ಸಾಕಾನೆಗಳು ಲಾರಿಯ ಒಳಕ್ಕೆ ಸಲಗವನ್ನು ಸೇರಿಸುವಲ್ಲಿ ಯಶಸ್ವಿಯಾದವು.

ಪುಂಡಾನೆಯ ಪುಂಡಾಟ

ಲಾರಿಯ ಬಳಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ನಿಂತಿದ್ದ ಸಂದರ್ಭ ಸಾಕಾನೆಗಳ ಮದ್ಯದಲ್ಲಿದ್ದ ಪುಂಡಾನೆಯು ಏಕಾಏಕಿ ದಾಳಿಗೆ ಮುಂದಾದ ಘಟನೆ ನಡೆಯಿತು. ಲಾರಿಯಲ್ಲಿ ಬಂಧಿಯಾದ ಸಲಗ ಲಾರಿಯ ಒಳಗೆ ಪುಂಡಾಟಿಕೆ ಮಾಡುತ್ತಾ ತನ್ನ ದಂತದಿAದ ಕಂಬಿಗಳನ್ನು ದೂಡುತ್ತಿತ್ತು, ಕೋಪದಿಂದ ವರ್ತಿಸುತ್ತಿತ್ತು.

ವೃದ್ಧೆಯ ಕೊಂದಿದ್ದ ಸಲಗ

ಕಳೆದ ಐದು ತಿಂಗಳ ಹಿಂದೆ ಈ ಸಲಗ ಬಾಡಗ ಬಾಣಂಗಾಲ ಗ್ರಾಮದ ಮಠ ಎಂಬಲ್ಲಿ ವೃದ್ಧ ಮಹಿಳೆ ಆಯಿಷಾ ಎಂಬವರನ್ನು ಹತ್ಯೆ ಮಾಡಿತ್ತು. ಅಲ್ಲದೇ ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಹಲವಾರು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಅಟ್ಟಾಡಿಸಿತ್ತು. ಹಲವಾರು ಮಂದಿ ಇದರಿಂದ ಗಾಯಗೊಂಡಿದ್ದರು. ಮನೆಗಳ ಬಳಿ ತೆರಳಿ ಮನೆಗಳ ಮೇಲೂ ದಾಳಿ ನಡೆಸುತಿತ್ತು ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

೧೦ ಕಿ.ಮೀ. ದೂರ ಓಡಿದ ಸಲಗ

ಈ ಪುಂಡಾನೆಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ತಂಡ ಬಾಡಗ ಬಾಣಂಗಾಲ ಗ್ರಾಮ ಹಾಗೂ ಸಿದ್ದಾಪುರ ಭಾಗದ ಕರಡಿಗೋಡು ಎಮ್ಮೆಗುಂಡಿ ಕಾಫಿ ತೋಟದಲ್ಲಿ ಸಾಕಾನೆಗಳ ನೆರವಿನಿಂದ ಸಲಗದ ಸೆರೆಗೆ ಮುಂದಾದರು. ಆದರೆ ಸಲಗ ಸುಮಾರು ೧೦ ಕಿ.ಮೀ. ದೂರದವರೆಗೆ ಓಡಿ ಕಾಫಿ ತೋಟಗಳನ್ನು ಹಾಗೂ ಅರಣ್ಯ ಪ್ರದೇಶವನ್ನು ದಾಟಿ ಕರಡಿಗೋಡಿನ ಚಿಕ್ಕನಳ್ಳಿ ಅವರೆಗುಂದ ಭಾಗಕ್ಕೆ ದಾಟಿ ಕಾಫಿ ತೋಟದೊಳಗೆ ಅವಿತುಕೊಂಡಿತು.

ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿದ್ದ ವೀರಾಜಪೇಟೆ ತಾಲೂಕು ಡಿ.ಸಿ.ಎಫ್. ಜಗನ್ನಾಥ್ ಮಾತನಾಡಿ, ದಕ್ಷ ಎಂಬ ಸಲಗವನ್ನು ಸೆರೆಹಿಡಿಯುವಂತೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಸೂಚನೆ ನೀಡಿದ್ದರು. ಸರ್ಕಾರ ಕೂಡ ಆದೇಶ ನೀಡಿತ್ತು. ಮುಂದಿನ ವಾರ ಬಾಡಗ-ಬಾಣಂಗಾಲ ಗ್ರಾಮದಲ್ಲಿ ಎರಡು ಕಾಡಾನೆಗಳನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ತಿತಿಮತಿ ವಲಯ ಎ.ಸಿ.ಎಫ್. ಗೋಪಾಲ್, ವಲಯ ಅರಣ್ಯಾಧಿಕಾರಿಗಳಾದ ಕಳ್ಳೀರ ದೇವಯ್ಯ, ಗಂಗಾಧರ್, ಉಮಾಶಂಕರ್, ವನ್ಯಜೀವಿ ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸ್, ಸಂಜಿತ್ ಸೋಮಯ್ಯ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ೧೦೦ ಮಂದಿ ಪಾಲ್ಗೊಂಡಿದ್ದರು.

ಪ್ರತ್ಯಕ್ಷ ವರದಿ: ವಾಸು ಎ.ಎನ್.