ಮಡಿಕೇರಿ, ಮೇ ೧೫ : ಕೃಷಿಕ ವರ್ಗಕ್ಕೆ ಮಾರಕವಾಗಿರುವ ಆದೇಶವನ್ನು ಸರಕಾರ ಹಿಂಪಡೆಯುವವರೆಗೆ ವಿವಿಧ ಹಂತಗಳಲ್ಲಿ ಹೋರಾಟವನ್ನು ರೂಪಿಸುವುದಾಗಿ ಕೊಡಗು ಜಿಲ್ಲಾ ಬಿಜೆಪಿ ಎಚ್ಚರಿಕೆ ನೀಡಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು, ತೋಟಗಳಲ್ಲಿರುವ ಮರಗಳ ಗಣತಿ ಕಾರ್ಯ ಜಿಲ್ಲೆಗೆ ಮಾರಕವಾಗಿದೆ. ಗಣತಿ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಬೆಳೆಗಾರರ ಪರವಾಗಿ ಬಿಜೆಪಿ ಈ ಹಿಂದೆಯೇ ಆಗ್ರಹಿಸಿದ್ದರೂ ಸರಕಾರ ಯಾವುದೇ ಸ್ಪಂದನೆ ನೀಡಿಲ್ಲ. ಆದ್ದರಿಂದ ಮೇ ೧೭ ರಂದು ಮಡಿಕೇರಿಯ ಅರಣ್ಯ ಭವನದ ಎದುರು ಬಿಜೆಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಬೆಳೆಗಾರರು, ಸಾರ್ವಜನಿಕರು ಹಾಗೂ ದೇವಾಲಯ ಸಮಿತಿಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲೆಯ ಶಾಸಕರು ಮರಗಳ ಗಣತಿ ಕಾರ್ಯ ಮುಂದುವರೆಯುವುದಿಲ್ಲ ಎಂದು ಭರವಸೆ ನೀಡಿದ ಮಾರನೇಯ ದಿನವೇ ಸಂಪಾಜೆ ಮತ್ತು ಚೆಂಬು ಭಾಗದಲ್ಲಿ ಅರಣ್ಯ ಸಿಬ್ಬಂದಿಗಳು ಮರಗಳ ಸರ್ವೆ ನಡೆಸಿದ್ದಾರೆ. ಅಧಿಕಾರಿಗಳು ಶಾಸಕರ ಮಾತಿಗೆ ಗೌರವ ನೀಡುತ್ತಿಲ್ಲವೇ ಅಥವಾ ಸರಕಾರದ ಮಟ್ಟದಲ್ಲಿ

(ಮೊದಲ ಪುಟದಿಂದ) ಸಮಸ್ಯೆ ಕುರಿತು ಗಮನ ಸೆಳೆಯುವಲ್ಲಿ ಶಾಸಕರು ವಿಫಲರಾಗಿದ್ದಾರೆಯೇ ಎನ್ನುವುದು ತಿಳಿಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ವ್ಯಾಪ್ತಿಯ ನೂರಾರು ಏಕರೆ ಪ್ರದೇಶದಲ್ಲಿ ಮರಗಳ ಹನನವಾಗಿದೆ. ಇದನ್ನೆಲ್ಲ ತಡೆಯಲು ಸಾಧ್ಯವಾಗದ ಅರಣ್ಯ ಅಧಿಕಾರಿಗಳು ತೋಟ ಗಳಲ್ಲಿರುವ ಮರಗಳ ಗಣತಿ ಕಾರ್ಯ ದಲ್ಲಿ ತೊಡಗಿದ್ದಾರೆ ಎಂದು ರವಿ ಕಾಳಪ್ಪ ಆರೋಪಿಸಿದರು. ನೂರಾರು ವರ್ಷಗಳಿಂದ ದೇವಾಲಯಗಳಲ್ಲಿ ಸಾಂಪ್ರದಾಯಿಕವಾಗಿ ಕಾಡು ಪ್ರಾಣಿಗಳ ವಸ್ತುಗಳನ್ನು ಧಾರ್ಮಿಕ ವಿಧಿ ವಿಧಾನಗಳಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಇದನ್ನು ಸ್ವಾಧೀನ ಪಡಿಸಿಕೊಳ್ಳುವ ಸರಕಾರದ ಪ್ರಸ್ತಾಪಕ್ಕೂ ಪ್ರತಿಭಟನೆಯ ಸಂದರ್ಭ ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದರು.

ಕಂದಾಯ ಇಲಾಖೆ ಈ ಹಿಂದೆ ಸಿ ಮತ್ತು ಡಿ ಭೂಮಿಯಲ್ಲಿ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆಗೆ ಬಿಟ್ಟುಕೊಟ್ಟಿತ್ತೇ ಹೊರತು ಸಂಪೂರ್ಣ ಹಕ್ಕುದಾರಿಕೆಯನ್ನು ನೀಡಿರಲಿಲ್ಲ. ಕಳೆದ ಅವಧಿಯಲ್ಲಿದ್ದ ಬಿಜೆಪಿ ಸರಕಾರ ಸಿ ಮತ್ತು ಡಿ ಭೂಮಿಯನ್ನು ಕಂದಾಯ ಇಲಾಖೆ ಮರಳಿ ಪಡೆದು ಈ ಭೂಮಿಯಲ್ಲಿ ಜೀವನ ಸಾಗಿಸುತ್ತಿರುವವರಿಗೆ ಹಕ್ಕುಪತ್ರ ನೀಡುವ ಕುರಿತು ನಿಯಮ ರೂಪಿಸಿತ್ತು. ಆದರೆ ಈಗಿನ ಕಾಂಗ್ರೆಸ್ ನೇತೃತ್ವದ ಸರಕಾರ ಸಿ ಮತ್ತು ಡಿ ಭೂಮಿಯನ್ನು ಮರಳಿ ಪಡೆಯುವ ಹಾಗೂ ಅರ್ಹರಿಗೆ ಹಕ್ಕುಪತ್ರ ನೀಡುವ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿಲ್ಲವೆAದು ರವಿ ಕಾಳಪ್ಪ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಪ್ರಧಾನ ಕಾಯದರ್ಶಿ ಮಹೇಶ್ ಜೈನಿ, ಕಾರ್ಯದರ್ಶಿ ನಾಳನ ಕನ್ನಿಕೆ, ವಕ್ತಾರರಾದ ಬಿ.ಕೆ.ಅರುಣ್ ಕುಮಾರ್ ಹಾಗೂ ತಳೂರು ಕಿಶೋರ್ ಕುಮಾರ್ ಉಪಸ್ಥಿತರಿದ್ದರು.