ಶ್ರೀಮಂಗಲ, ಮೇ ೧೪: ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದಲ್ಲಿ ಒಂದೇ ನದಿಗೆ (ನ್Ãಟ್ ಕುಂದ್ ನದಿ ) ೨೦೧೯ ಸಾಲಿನಲ್ಲಿ ಒಂದು ಹಾಗೂ ೨೦೨೨ ಸಾಲಿನಲ್ಲಿ ಎರಡು ಸೇರಿ ಒಟ್ಟು ಮೂರು ಕಡೆ ರೂ.೫.೦೫ ಕೋಟಿ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಮ್ ವಿಫಲವಾಗಿರುವ ‘ಶಕ್ತಿ’ ವರದಿ ಗಮನ ಸೆಳೆದ ಬೆನ್ನಲ್ಲೇ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಮಂಗಳವಾರ ಖುದ್ದು ಚೆಕ್ ಡ್ಯಾಮ್‌ಗಳ ಪರಿಶೀಲನೆ ನಡೆಸಿದರು.

ಪರಿಶೀಲನೆ ನಡೆಸಿ ಮಾತನಾಡಿದ ಅವರು ಈ ವೈಫಲ್ಯ ಕಂಡಿರುವ ಯೋಜನೆಗಳನ್ನು ಮುಂಗಾರು ಮುನ್ನ ಸರಿಪಡಿಸಲು ಇಂಜಿನಿಯರ್, ಎಲ್ಲಾ ಅಧಿಕಾರಿ ವರ್ಗ ಹಾಗೂ ಕಾಮಗಾರಿ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಸೂಚನೆ ನೀಡಿದರಲ್ಲದೆ ವ್ಯವಸ್ಥೆ ಗಮನಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದರು.

ಈ ಬಗ್ಗೆ ಮಾತನಾಡಿದ ಎ. ಎಸ್. ಪೊನ್ನಣ್ಣ ಅವರು ನ್Ãಟ್ ಕುಂದ್ ನದಿಯಲ್ಲಿ ಹರಿದು ಹೋಗುವ ನೀರನ್ನು ತಡೆಹಿಡಿದು ಉಪ ಯೋಗಿಸುವ ನಿಟ್ಟಿನಲ್ಲಿ ನಿರ್ಮಿಸಿರುವ ಮೂರು ಚೆಕ್ ಡ್ಯಾಮ್ ನದಿಯ ನೀರನ್ನು ತಡೆ ಹಿಡಿಯುವ ಕೆಲಸ ಆಗುತ್ತಿಲ್ಲ. ಆದರಿಂದ ಈ ಯೋಚನೆ ವಿಫಲವಾಗಿದೆ ಎಂದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದರ ವೀಕ್ಷಣೆಯನ್ನು ಮಾಡಲಾಗಿದೆ. ವೀಕ್ಷಣೆ ಸಂದರ್ಭ ಬಹಳ ಅವೈಜ್ಞಾನಿಕವಾಗಿ ಯೋಜನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮುಂದಿನ ಮಳೆಗಾಲ ಆರಂಭಕ್ಕೆ ಮುನ್ನ ಇದನ್ನು ಸರಿಪಡಿಸುವ ಕೆಲಸವಾಗಬೇಕು.ಬಹಳ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರ ಸರ್ಕಾರದ ಹಣ ಇಲ್ಲಿ ಬಳಕೆಯಾಗಿದೆ. "ಹಣದ ದುರ್ಬಳಕೆ" ಎಂಬ ಆರೋಪವನ್ನು ಈಗಲೇ ಮಾಡಲು ಹೋಗುವುದಿಲ್ಲ. ಆದರೂ ಕೂಡ ಇದು ವೈಜ್ಞಾನಿಕವಾಗಿ ನಡೆದಿಲ್ಲ. ಆದ್ದರಿಂದ ಮುಂಗಾರು ಆರಂಭ ದೊಳಗೆ ಆಗಿರುವ ಲೋಪ ದೋಷವನ್ನು ಸರಿಪಡಿಸಿ ಮುಂದಿನ ಬೇಸಿಗೆಯಲ್ಲಿ ನದಿ ನೀರನ್ನು ತಡೆಹಿಡಿದು ಜನರಿಗೆ ಉಪಯೋಗ ವಾಗುವ ರೀತಿಯಲ್ಲಿ ಈ ಯೋಜನೆ ಸರಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸೂಚನೆ ನೀಡಲಾಗಿದೆ ಈ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಈ ಸಂದರ್ಭ ಚೆಕ್ ಡ್ಯಾಮ್ ನಿರ್ಮಾಣದಿಂದ ನದಿಯ ನೀರು ನಿಲ್ಲುತ್ತಿಲ್ಲ. ಯೋಜನೆಯಿಂದ ಜನರಿಗೆ ಪ್ರಯೋಜನವಾಗಿಲ್ಲ, ಯೋಜನೆಯನ್ನು ಅಧಿಕಾರಿವರ್ಗ ನಿರ್ವಹಣೆ ಮಾಡುತಿದ್ದರೂ ನೀರು ಸಂಗ್ರಹವಾಗುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

ಭೇಟಿ ಸಂದರ್ಭ ಪೊನ್ನಂಪೇಟೆ ತಾಲೂಕು ಬಗರ್ ಹುಕುಂ ಅಕ್ರಮ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ಗ್ರಾ. ಪಂ. ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಬೊಳ್ಳೇರ ಪೊನ್ನಪ್ಪ, ಅಣ್ಣಳಮಾಡ ಚಿಣ್ಣಪ್ಪ, ಪ್ಯಾಕ್ಸ್ ನಿರ್ದೇಶಕ ಕರ್ತಮಾಡ ಮಿಲನ್, ಕಾಳಿಮಾಡ ರಶಿಕ್, ಕರ್ತಮಾಡ ನಂದ, ಕಳಕಂಡ ಜೀತು ಕುಶಾಲಪ್ಪ, ಬಲ್ಯಮೀದೇರಿರ ರನ್ನು ಮತ್ತಿತರರು ಹಾಜರಿದ್ದರು.

- ಅಣ್ಣೀರ ಹರೀಶ್ ಮಾದಪ್ಪ