ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಮೇ ೭: ಬೆಂಗಳೂರು ಕೊಡವ ಸಮಾಜಕ್ಕೆ ಕೆಲ ವರ್ಷಗಳ ಹಿಂದೆ ಯಲಹಂಕದಲ್ಲಿ ರಾಜ್ಯ ಸರ್ಕಾರ ಮಂಜೂರು ಮಾಡಿದ್ದ ೭ ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷಿಸಿ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಬಿ.ಸಿ. ಮೈಲಾರಪ್ಪ ಸೇರಿ ನಾಲ್ವರು ಬಂಧಿತರಾಗಿ ನ್ಯಾಯಾಲಯದ ವಿಚಾರಣೆಗೆ ಒಳಪಟ್ಟು ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಹೈದರಾಬಾದ್‌ನ ಜೂಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ವಂಚನೆಯ ದೂರು ದಾಖಲಾಗಿ ತನಿಖೆ ಹಂತದಲ್ಲಿದೆ.

ಹೈದರಾಬಾದ್ ಮೂಲದ ವಾಣಿಜ್ಯ ಮತ್ತು ವಸತಿ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ‘ಶ್ರಿವೆನ್ ಇನ್‌ಫ್ರಾ ಪ್ರಾಜೆಕ್ಟ್’ ಸಂಸ್ಥೆಯ ಮಾಲೀಕ ಕೆ. ಶಶಿಧರ್ ರೆಡ್ಡಿ ಎಂಬವರು ೨೦೨೨ರಲ್ಲಿ ಬೆಂಗಳೂರಿನಲ್ಲಿ ಭೂಮಿಯನ್ನು ಖರೀದಿ ಮಾಡಲು ತಮ್ಮ ಪರಿಚಿತರ ಮೂಲಕ ಸೂಕ್ತ ಜಾಗ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಆರೋಪಿಗಳಾದ ಕೊರಟಗೆರೆ ಕೃಷ್ಣಪ್ರಸಾದ್,

ಆರ್. ಜಗನ್ನಾಥ್, ಸುರೇಂದರ್ ರೆಡ್ಡಿ ಎಂಬವರು ಪ್ರಸ್ತುತ ಕೊಡವ ಸಮಾಜಕ್ಕೆ ಮಂಜೂರಾಗಿರುವ ಭೂಮಿಯನ್ನು ತೋರಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. ಯಲಹಂಕದ ಹೊಸಹಳ್ಳಿಯಲ್ಲಿ ಇರುವ ಈ ಭೂಮಿಗೆ ಕೃಷ್ಣಪ್ರಸಾದ್ ಮಾಲೀಕ ಈ ಜಮೀನು ಖರೀದಿಗೆ ಸೂಕ್ತವಾಗಿದೆ ಎಂದು ಉದ್ಯಮಿಗೆ ನಂಬಿಸಿದ್ದಾರೆ. ಆ ಬಳಿಕ ಜಾಕೋನ್ಸ್ ಬಿಲ್ಡಿಂಗ್ ಟೆಕ್ನಾಲಜಿಯ ಪ್ರತಿನಿಧಿ ಎಂದು ಹೇಳಿಕೊಂಡ ಇನ್ನೊರ್ವ ಆರೋಪಿ ಆರ್. ಜಗನ್ನಾಥ್ ಇವರ ಜೊತೆ ಸೇರಿಕೊಂಡು ಜಮೀನು ಮಾರಾಟಕ್ಕೆ ಶಶಿಧರ್ ಅವರ ಮನವೊಲಿಸಿ ನಕಲಿ ದಾಖಲೆಗಳ ಪ್ರತಿಗಳನ್ನು ತೋರಿಸಿ ಮೂಲ ದಾಖಲೆಗಳನ್ನು ನಂತರ ನೀಡುವುದಾಗಿ ಭರವಸೆ ನೀಡಿ ಶಶಿಧರ್ ರೆಡ್ಡಿ ಅವರ ಬಳಿಯಿಂದ ರೂ. ೫.೩೫ ಕೋಟಿ ಮುಂಗಡ ಹಣವನ್ನು ಪಡೆದುಕೊಂಡಿದ್ದಾರೆ.

ಕೊಡವ ಸಮಾಜಕ್ಕೆ ಈ ಭೂಮಿಯ ಮಂಜೂರಾತಿ ಕುರಿತ ಕಡತವು ೨೦೧೧ ರಿಂದಲೇ ರಾಜ್ಯ ಸರ್ಕಾರದ ಬಳಿ ಪ್ರಕ್ರಿಯೆಯಲ್ಲಿ ಇದ್ದರೂ ಸಮಾಜಕ್ಕೆ ಭೂಮಿಯ ಸ್ವಾಧೀನ ನೀಡಿರಲಿಲ್ಲ. ೨೦೨೧ ರ ಡಿಸೆಂಬರ್ ತಿಂಗಳಿನಲ್ಲಿ ಪ್ರಕ್ರಿಯೆ ಪೂರ್ಣಗೊಂಡು ೭ ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿತ್ತು. ನಂತರ ಕೊಡವ ಸಮಾಜ ಜಾಗದಲ್ಲಿ ಬೇಲಿ ಅಳವಡಿಸಿ ಬಂದೋಬಸ್ತ್ ಮಾಡಿತ್ತು.

ಶಶಿಧರ್ ರೆಡ್ಡಿ ಅವರ ನೌಕರರು ಸ್ಥಳಕ್ಕೆ ಭೇಟಿ ನೀಡಿದಾಗ ಮತ್ತು ಜಮೀನಿನ ಹಿನ್ನೆಲೆಯನ್ನು ಪರಿಶೀಲಿಸಿದಾಗ ಈ ಜಮೀನು ಕೃಷ್ಣಪ್ರಸಾದ್ ಅವರ ತಂದೆಗೆ ಮತ್ತು ಕೃಷ್ಣಪ್ರಸಾದ್‌ಗೆ ಸೇರಿಯೇ ಇಲ್ಲ ಎಂದು ಬೆಳಕಿಗೆ ಬಂದಿದೆ. ವಂಚನೆಯ ಕುರಿತು ಶಶಿಧರ್ ರೆಡ್ಡಿ ಗಮನಕ್ಕೆ ಬಂದು ತಾನು ನೀಡಿರುವ ಮುಂಗಡವನ್ನು ಕೂಡಲೇ ವಾಪಸ್ ನೀಡುವಂತೆ ಒತ್ತಡ ಹೇರಿದ್ದಾರೆ. ಈ ವೇಳೆ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮೈಲಾರಪ್ಪ ಶಶಿಧರ್‌ಗೆ ಕರೆ ಮಾಡಿ ‘ತನಗೆ ಸರ್ಕಾರದ ಮಟ್ಟದಲ್ಲಿ ಉತ್ತಮ ಸಂಪರ್ಕವಿದೆ, ಹಣಕ್ಕಾಗಿ ಆರೋಪಿಗಳ ಮೇಲೆ ಒತ್ತಡ ಹೇರಬೇಡಿ’ ಎಂದು ಬೆದರಿಕೆಯೊಡ್ದಿದ್ದಾರೆ. ಆ ಬಳಿಕ ಈ ಜಮೀನನ್ನು ಸರ್ಕಾರವು ವೈಎಎಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಕೊಡವ ಸಮಾಜಕ್ಕೆ ಹಂಚಿಕೆ ಮಾಡಿರುವುದು ಶಶಿಧರ್ ರೆಡ್ಡಿ ಗಮನಕ್ಕೆ ಬಂದಿದೆ.

ಆರೋಪಿಗಳು ತಮಗೆ ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಂಪರ್ಕವಿದ್ದು ಸರ್ಕಾರದಿಂದ ಭೂ ಮಂಜೂರಾತಿ ಮಾಡಿಸಿಕೊಂಡು ನಂತರ ಹಸ್ತಾಂತರಿಸುವ ಸಬೂಬು ಕೂಡ ಹೇಳಿ ಕೆಲ ತಿಂಗಳ ಕಾಲ ಕಾನೂನಾತ್ಮಕ ಕ್ರಮಕ್ಕೆ ಮುಂದಾಗದAತೆ ಎಚ್ಚರ ವಹಿಸಿದ್ದಾರೆ. ಆದರೆ ಹಣ ಹಿಂತಿರುಗಿಸದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಕೆ. ಶಶಿಧರ್ ರೆಡ್ಡಿ ಅವರು ೨೦೨೩ರ ಫೆಬ್ರವರಿ ೧೫ರಂದು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ೨೦೨೪ರ ಮಾರ್ಚ್ ೨೨ರಂದು ಮೈಲಾರಪ್ಪ ಸೇರಿದಂತೆ ಇತರ ಆರೋಪಿಗಳಾದ ಕೊರಟಗೆರೆ ಕೃಷ್ಣಪ್ರಸಾದ್, ಆರ್. ಜಗನ್ನಾಥ್, ಸುರೇಂದರ್ ರೆಡ್ಡಿ ಅವರನ್ನು ಬಂಧಿಸಿದ್ದರು. ೧೪ ದಿನಗಳ ನ್ಯಾಯಾಂಗ ಬಂಧನದ ಬಳಿಕ ಹೈದರಾಬಾದ್‌ನ ಚೀಫ್ ಮೆಟ್ರೋಪಾಲಿಟನ್ ನ್ಯಾಯಾಲಯವು ಏಪ್ರಿಲ್ ೪ ರಂದು ಮೈಲಾರಪ್ಪ ಸೇರಿದಂತೆ ನಾಲ್ವರನ್ನು ಬಿಡುಗಡೆ ಮಾಡಿದೆ.

ಈ ಮಧ್ಯೆ ಸರ್ಕಾರಿ ಅಧಿಕಾರಿಯಾಗಿರುವ ಮೈಲಾರಪ್ಪ ಅವರ ಬಂಧನದ ಬಳಿಕ ನಿಯಮಾನುಸಾರ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬೆಂಗಳೂರು ವಿವಿಯ ಕುಲಪತಿ ಅವರಿಗೆ ಪತ್ರ ಬರೆದು ಬಂಧನದ ಮಾಹಿತಿಯನ್ನು ನೀಡಿದ್ದಾರೆ. ಆದರೆ ಈ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಟ್ಟ ಕುಲಪತಿ ಕೆಸಿಎಸ್‌ಆರ್ ನಿಯಮಾನುಸಾರ ಬಂಧಿತ ವ್ಯಕ್ತಿಯನ್ನು ಅಮಾನತುಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ಈವರೆಗೂ ವರದಿಯನ್ನು ನೀಡಿಲ್ಲ ಎನ್ನಲಾಗಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕೊಡವ ಸಮಾಜದ ಅಧ್ಯಕ್ಷ ಕರವಟ್ಟೀರ ಪೆಮ್ಮಯ್ಯ ಅವರು ಈ ವಿಷಯ ಇಂದಷ್ಟೆ ತಮ್ಮ ಗಮನಕ್ಕೆ ಬಂದಿದೆ. ಹೈದರಾಬಾದ್ ಪೊಲೀಸರನ್ನು ಸಂಪರ್ಕಿಸಲಾಗುತಿದ್ದು, ಸೂಕ್ತ ಕಾನೂನು ಕ್ರಮವನ್ನೂ ಕೈಗೊಳ್ಳುವುದಾಗಿ ತಿಳಿಸಿದರು.