ವಿಶೇಷ ವರದಿ :

ಅಣ್ಣೀರ ಹರೀಶ್ ಮಾದಪ್ಪ

ಶ್ರೀಮಂಗಲ, ಮೇ ೭: ಒಂದೇ ಗ್ರಾಮಕ್ಕೆ, ಒಂದೇ ನದಿಗೆ, ಕೇವಲ ಎರಡು ಕಿಲೋ ಮೀಟರ್ ಅಂತರದಲ್ಲಿ ಕೋಟ್ಯಂತರ ಅನುದಾನ ವೆಚ್ಚಮಾಡಿ ನಿರ್ಮಿಸಿದ ಮೂರೂ ಚೆಕ್ ಡ್ಯಾಮ್ ಉದ್ದೇಶಿತ ಫಲ ನೀಡುವಲ್ಲಿ ಸಂಪೂರ್ಣ ವೈಫಲ್ಯತೆ ಕಂಡಿದೆ. ಇದರಿಂದ ಬೇಸಿಗೆಯಲ್ಲಿ ನೀರಿನ ಬರ ನೀಗಿಸುವ ಕನಸು ಕಂಡಿದ್ದ ಗ್ರಾಮಸ್ಥರು ನಿರಾಸೆಗೊಂಡಿದ್ದಾರೆ.

ಮೂರು ಚೆಕ್ ಡ್ಯಾಮ್ ವೈಫಲ್ಯ ಕಂಡಿದ್ದು, ಚೆಕ್ ಡ್ಯಾಮ್ ನಿರ್ಮಾಣದ ಪರಿಕಲ್ಪನೆ ಹಾಗೂ ಅದರ ಉಪಯೋಗಕ್ಕೆ ಅಪವಾದವಾಗಿದೆ

ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದಲ್ಲಿ ಹುಟ್ಟುವ "ನ್Ãಟ್ ಕುಂದ್" ನದಿ ಪಶ್ಚಿಮ ಅಭಿಮುಖವಾಗಿ ಹರಿಯುತ್ತಿದ್ದು, ಈ ನದಿಯು ಕಕ್ಕಟ್ಟ್ ಪೊಳೆ ನದಿ ಮೂಲಕ ಬರಪೊಳೆಗೆ ಸೇರಿ ಕೇರಳಕ್ಕೆ ಹರಿಯುತ್ತದೆ. ಮಳೆಗಾಲದಲ್ಲಿ ಅತಿವೃಷ್ಟಿಗೆ ತುತ್ತಾಗುವ ಬಿರುನಾಣಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕೃಷಿ ಸೇರಿದಂತೆ ಕುಡಿಯುವ ನೀರಿಗೆ ಅಭಾವ ಎದುರಾಗುತ್ತದೆ. ಗುಡ್ಡಗಾಡು ಪ್ರದೇಶವಾಗಿರುವ ಬಿರುನಾಣಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಬೇಸಿಗೆಯಲ್ಲಿ ಕುಸಿಯದಂತೆ ಒಂದರ ಹಿಂದೆ ಒಂದರAತೆ ಒಂದೇ ನದಿಗೆ ೨ ಕಿ.ಮೀ. ವ್ಯಾಪ್ತಿಯಲ್ಲಿ ೩ ಚೆಕ್ ಡ್ಯಾಮ್ ನಿರ್ಮಾಣದಿಂದಲೂ ಯಾವುದೇ ಪ್ರಯೋಜನವಾಗಿಲ್ಲ. ಯೋಜನೆ ರೂಪಿಸಿ, ಕಾಮಗಾರಿ ಪೂರೈಸಿದ ನಂತರ ಯೋಜನೆ ಉದ್ದೇಶಿತ ಫಲ ನೀಡಿದೆಯೇ ಎಂಬ ಬಗ್ಗೆ ಪರಿಶೀಲನೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕು. ಆದರೆ ಒಂದರ ಹಿಂದೆ ಒಂದು ವೈಫಲ್ಯವಾದರೂ ಉಂಟಾಗಿರುವ ಲೋಪದೋಷ ನಿವಾರಿಸಿ ಸದುಪಯೋಗಪಡಿಸಲು ಮುಂದಾಗದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಚೆಕ್ ಡ್ಯಾಮ್ ಡಿಸೈನ್, ತಾಂತ್ರಿಕತೆ, ಕಾಮಗಾರಿ ಗುಣಮಟ್ಟ ಎಲ್ಲಿ ಲೋಪವಾಗಿದೆ ಎಂದು ಗುರುತಿಸಿ, ಸಾರ್ವಜನಿಕ ಹಣವನ್ನು ಪೋಲು ಮಾಡದೇ ಸದ್ಬಳಕೆ ಮಾಡಬೇಕಾಗಿದೆ.

ಸರಣಿ ವೈಫಲ್ಯತೆ ಕಂಡ ೩ ಚೆಕ್ ಡ್ಯಾಮ್ ಯಾವುದು?

೧. ನ್Ãಟ್ ಕುಂದ್ ನದಿಗೆ ೨೦೧೯ರಲ್ಲಿ ಬಲ್ಯಮಟ್ಟ ಎಂಬ ಸ್ಥಳದಲ್ಲಿ ಸಣ್ಣ ನೀರಾವರಿ ಇಲಾಖೆ (ಎಂಐಡಿ) ಯಿಂದ ರೂ. ೨೦ ಲಕ್ಷ ವೆಚ್ಚದಲ್ಲಿ ಒಂದು ಚೆಕ್ ಡ್ಯಾಮ್ ನಿರ್ಮಾಣ.

೨. ಈ ಚೆಕ್ ಡ್ಯಾಮ್ ನಂತರ ಇದೇ ನದಿಯ ಮೇಲ್ಭಾಗ ಅಂದಾಜು ೧ ಕಿ.ಮೀ. ಅಂತರದಲ್ಲಿ ಮಂಗುAಡಿ ಎಂಬ ಸೇತುವೆ

(ಮೊದಲ ಪುಟದಿಂದ) ಸಮೀಪ ೨೦೨೨ ರಲ್ಲಿ ರೂ. ೧.೮೫ ಕೋಟಿ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ಚೆಕ್ ಡ್ಯಾಮ್ ನಿರ್ಮಾಣ.

೩. ಇದಾದ ನಂತರ ೨೦೨೨ರಲ್ಲಿ ಈ ಸ್ಥಳದಿಂದ ಇದೇ ನದಿಗೆ ಅಂದಾಜು ೧ ಕಿ.ಮೀ. ಅಂತರದಲ್ಲಿ ನ್Ãಟ್ ಕುಂದ್ ಎಂಬ ಸ್ಥಳದ ಸಮೀಪ ರೂ. ೩ ಕೋಟಿ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ಮೂರನೇ ಚೆಕ್ ಡ್ಯಾಮ್ ಸಹಿತ ಸೇತುವೆಯೊಂದಿಗೆ ನಿರ್ಮಿಸಲಾಗಿದೆ.

ವಿಪರ್ಯಾಸವೇನೆಂದರೆ ೨೦೧೯ ರಲ್ಲಿ ನಿರ್ಮಿಸಿದ ಚೆಕ್ ಡ್ಯಾಮ್‌ನಲ್ಲಿ ಒಂದೇ ಒಂದು ವರ್ಷವೂ ನೀರು ಸಂಗ್ರಹವಾಗಿಲ್ಲ. ಇದರ ವೈಫಲ್ಯ ಕಣ್ಣೆದುರು ಇರುವಾಗಲೇ ಅದನ್ನು ಸರಿಪಡಿಸದೇ ೨೦೨೨ರಲ್ಲಿ ನಿರ್ಮಿಸಿದ ೨ ಚೆಕ್ ಡ್ಯಾಮ್‌ನಲ್ಲೂ ಸಹ ೨೦೨೩ ಮತ್ತು ೨೦೨೪ ರಲ್ಲಿ ಒಂದೇ ಒಂದು ಹನಿ ನೀರು ಸಂಗ್ರಹವಾಗುತ್ತಿಲ್ಲ. ಚೆಕ್ ಡ್ಯಾಮ್ ವೈಫಲ್ಯತೆಗೆ ತಂತ್ರಜ್ಞರು, ಇಂಜಿನಿಯರ್‌ಗಳು, ಗುತ್ತಿಗೆದಾರರು ಹೊಣೆಗಾರರು ಯಾರು ಎಂಬ ಪ್ರಶ್ನೆಗೆ ಉನ್ನತಮಟ್ಟದ ತಾಂತ್ರಿಕ ತಜ್ಞರ ಸಮಿತಿಯ ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಮಳೆಗಾಲದಲ್ಲಿ ಹರಿದು ಹೋಗುವ ಮಳೆ ನೀರು ಹಾಗೂ ನದಿ ನೀರುಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬೇಸಿಗೆಯ ಬಳಕೆಗೆ ನೀರನ್ನು ಸಂಗ್ರಹಿಸಿಕೊಳ್ಳಲು ಮಳೆ ಕಡಿಮೆಯಾಗುತ್ತಿದ್ದಂತೆ ಚೆಕ್ ಡ್ಯಾಮ್‌ಗಳಲ್ಲಿ ಗೇಟ್‌ಗಳನ್ನು ಬಂದ್ ಮಾಡಿ ಹರಿಯುವ ನೀರನ್ನು ತಡೆದು ಸಂಗ್ರಹಿಸಿ ಉಳಿದ ನೀರು ಚೆಕ್ ಡ್ಯಾಮ್ ಮೇಲೆ ಹರಿದು ಹೋಗುವಂತೆ ಮಾಡಿ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತದೆ. ಮೂರು ಚೆಕ್ ಡ್ಯಾಮ್ ಸಹ ಐದು ಅಡಿಗಿಂತ ಎತ್ತರವಾಗಿ ನೀರು ಸಂಗ್ರಹ ಮಾಡುವ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗಿದೆ. ನದಿಯ ಎರಡು ದಡಗಳಲ್ಲಿ ಸುಮಾರು ೧೦೦ ಮೀಟರ್‌ವರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. ಮೇಲಿನ ಚೆಕ್ ಡ್ಯಾಮ್ ಉದ್ದೇಶಿತ ಗುರಿ ಸಾಧಿಸಿದರೆ ಅದರ ಹಿನ್ನೀರು ಎರಡು ಮೂರು ಕಿಲೋ ಮೀಟರ್‌ವರೆಗೆ ಸಂಗ್ರಹವಾಗುತ್ತದೆ. ಈ ಮೂಲಕ ಅಂತರ್ಜಲ ಮಟ್ಟ ಬೇಸಿಗೆಯಲ್ಲಿ ಕುಸಿಯದಂತೆ ಅಂದರೆ ಸುತ್ತಮುತ್ತಲಿನ ನೀರಿನ ಮೂಲಗಳಾದ ಕೆರೆ, ಕಟ್ಟೆ, ಬಾವಿಗಳಲ್ಲಿಯೂ ನೀರಿನ ಮಟ್ಟದ ಕುಸಿಯಾದಂತೆಯೂ ಕಾಪಾಡುತ್ತದೆ. ಸಂಗ್ರಹವಾದ ಈನೀರÀನ್ನು ಕೃಷಿ, ಕುಡಿಯಲು, ಪ್ರಾಣಿ, ಪಕ್ಷಿ, ಜಾನುವಾರುಗಳು ಉಪಯೋಗಿ ಸಲು ಸಾಧ್ಯವಾಗುತ್ತದೆ ಹಾಗೂ ವಾತಾವರಣ ತಂಪಾಗಿರುತ್ತದೆ.

ಬೇಸಿಗೆಯಲ್ಲಿ ಕೊಡಗು ಜಿಲ್ಲೆ ತೀವ್ರ ಬಿಸಿಲಿನ ಬೇಗೆಯನ್ನು ಅನುಭವಿಸುತ್ತಿದೆ. ಪ್ರಸಕ್ತ ವರ್ಷ ಅಂತೂ ಬರಗಾಲದ ಛಾಯೆ ಹದ್ದುಮಿರಿದೆ. ನದಿ ಮೂಲಗಳು ತೋಡು ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಇಂತಹ ಸಂದರ್ಭದಲ್ಲಿ ಈ ಹಿಂದಿನಿAದಲೂ ಸಂಘ-ಸAಸ್ಥೆ, ಬುದ್ದಿಜೀವಿಗಳು ಚೆಕ್ ಡ್ಯಾಮ್ ನಿರ್ಮಿಸುವ ಮೂಲಕ ಬೇಸಿಗೆಯ ನೀರಿನ ಅಭಾವವನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂಬ ಸಲಹೆಯನ್ನು ಅತ್ಯಂತ ವಿಶ್ವಾಸ ಮತ್ತು ಭರವಸೆ ಯಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನೀಡುತ್ತಾ ಬಂದಿದ್ದಾರೆ. ಆದರೆ ಈ ಮೇಲಿನ ಚೆಕ್ ಡ್ಯಾಮ್ ವೈಫಲ್ಯದಿಂದ ಚೆಕ್ ಡ್ಯಾಮ್ ಪರಿಕಲ್ಪನೆಗೆ ಅಪವಾದ ತಂದೊಡ್ಡಿ ರುವುದಂತು ವಿಪರ್ಯಾಸವೇ ಸರಿ.