ಸೋಮವಾರಪೇಟೆ, ಮೇ ೬: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ೧೧೦ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಶಾಫಿ ಸಅದಿ, ಕನ್ನಡ ನಾಡು, ನುಡಿ ಬೆಳವಣಿಗೆಗೆ ದುಡಿದ ಮಹನೀಯರ ಆದರ್ಶ ಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಅಭಿಪ್ರಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ಗೆ ೧೦೫ ವರ್ಷಗಳ ಸಂಭ್ರಮ. ಕನ್ನಡ ಭಾಷೆಯ ರಕ್ಷಣೆಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನು ಸ್ಥಾಪಿಸಿದರು. ಈಗ ಹೆಮ್ಮರವಾಗಿ ಬೆಳೆದಿದೆ. ಈಗ ನಾವೆಲ್ಲರೂ ಜಾತಿ, ಧರ್ಮ, ಪಂಗಡ, ವರ್ಣ ಭೇದ ಮರೆತು ಕನ್ನಡ ಭಾಷಾ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ಜಲಜಾ ಶೇಖರ್ ಮಾತನಾಡಿ, ಎಲ್ಲಾ ಭಾಷೆ, ಸಂಸ್ಕೃತಿಯನ್ನು ಪ್ರೀತಿಸಬೇಕು. ಆದರೆ ನಮ್ಮ ಮಾತೃಭಾಷೆಯಲ್ಲಿ ಜೀವಿಸಬೇಕು. ನಮ್ಮ ನಡೆ, ನುಡಿಗಳಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮೂಲಕ ಸಾಹಿತಿಗಳು, ಕವಿಗಳು ಬೆಳೆದಿದ್ದಾರೆ. ಸಾವಿರಾರು ಸಾಹಿತಿಗಳು ಕನ್ನಡ ಭಾಷಾ ಬೆಳವಣಿಗೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಪರಿಷತ್ ಮೂಲಕ ಹೆಚ್ಚಿನ ಕಾರ್ಯಕ್ರಮಗಳು ನಡೆದು, ಯುವ ಪ್ರತಿಭಾವಂತ ಸಾಹಿತಿಗಳ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಜೆ.ಸಿ. ಶೇಖರ್ ಮತ್ತು ಜಲಜಾ ಶೇಖರ್ ಅವರುಗಳನ್ನು ಸನ್ಮಾನಿಸಿಲಾಯಿತು. ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಸೋಮವಾರಪೇಟೆ ಠಾಣಾಧಿಕಾರಿ ರಮೇಶ್ ಕುಮಾರ್, ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಎ.ಪಿ. ವೀರರಾಜು, ಕೋಶಾಧ್ಯಕ್ಷ ಕೆ.ಪಿ. ದಿನೇಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.