ಸೋಮವಾರಪೇಟೆ, ಮೇ ೪: ಕುಶಾಲನಗರ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಬೇಳೂರು ಬಾಣೆ ಸಮೀಪವಿರುವ ಕಾಟ್ನಮನೆ ಜಂಕ್ಷನ್‌ನಲ್ಲಿ ಕಾಡಾನೆಯೊಂದು ರಸ್ತೆಗೆ ಅಡ್ಡಬಂದ ಪರಿಣಾಮ, ಬೈಕ್ ಸಹಿತ ಸವಾರ ನೇರವಾಗಿ ಆನೆಗೆ ಡಿಕ್ಕಿ ಹೊಡೆದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ೯.೩೦ರ ಸುಮಾರಿಗೆ ಬೇಳೂರು ಗ್ರಾಮಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದ ಹಾನಗಲ್ಲುಬಾಣೆ ನಿವಾಸಿ ರಾಮು ಎಂಬವರಿಗೆ ಕಾಟ್ನಮನೆ ಜಂಕ್ಷನ್‌ನ ತಿರುವಿನಲ್ಲಿ ಕಾಡಾನೆ ಅಡ್ಡ ಬಂದಿದೆ. ಏಕಾಏಕಿ ರಸ್ತೆಗೆ ಅಡ್ಡಬಂದ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾದ ಹಿನ್ನೆಲೆ ಬೈಕ್ ಸಹಿತ ಆನೆಗೆ ಡಿಕ್ಕಿ ಹೊಡೆದಿದ್ದಾರೆ.

ಈ ಘಟನೆಯಿಂದ ಕೆರಳಿದ ಕಾಡಾನೆ ರಾಮು ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಶತಾಯಗತಾಯ ಪ್ರಯತ್ನದಿಂದ ರಾಮು ಅವರು ಓಡಿ ತಪ್ಪಿಸಿಕೊಳ್ಳುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ.

ಘಟನೆಯಿAದ ಬಲಗೈ ಹಾಗೂ ಎಡಗಾಲಿಗೆ ಗಾಯಗಳಾಗಿದ್ದು, ತಕ್ಷಣ ಗಾಯಾಳುವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಆಸ್ಪತ್ರೆಗೆ ತೆರಳಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.