ಮಡಿಕೇರಿ, ಮೇ ೩: ಕೊಡಗು ಜಿಲ್ಲೆಯ ಸಿದ್ದಾಪುರ ವಿಭಾಗದ ಕಾವೇರಿ ಜಲಾನಯನ ಪ್ರದೇಶದ ೨೪೦೦ ಎಕರೆ ಕಾಫಿ ತೋಟವನ್ನು ಭೂ ಪರಿವರ್ತನೆ ಮಾಡುವ ಮೂಲಕ ಕೃಷಿಯೇತರ ಚಟುವಟಿಕೆಗಳಿಗೆ ಬಳಸುವ ಪ್ರಯತ್ನ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ಪ್ರಕರಣದ ಕುರಿತು ಸರಕಾರಕ್ಕೆ ಮತ್ತು ಸಂಬAಧಿಸಿದ ಇಲಾಖೆಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಸಿರ ಪರಿಸರದಿಂದ ಕೂಡಿರುವ ಕಾಫಿ ತೋಟವನ್ನು ಭೂ ಪರಿವರ್ತಿಸುವ ಮೂಲಕ ದೈತ್ಯಾಕಾರದ ವಿಲ್ಲಾಗಳು, ಬೃಹತ್ ಟೌನ್‌ಶಿಪ್‌ಗಳು ಮತ್ತು ಮನೆಗಳನ್ನು ನಿರ್ಮಿಸುವ ಸಾಧ್ಯತೆ ಇದೆ. ಇದು ಮುಂದೆ ಭಾರೀ ಅನಾಹುತಗಳಿಗೆ ಕಾರಣವಾಗಬಹುದು ಎಂದು ಆರೋಪಿಸಿದ್ದಾರೆ.

ಭೂ ಪರಿವರ್ತನಾ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಷ್ಟçಪತಿ, ಪ್ರಧಾನಮಂತ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ, ಯುನೆಸ್ಕೋದ ಮಹಾನಿರ್ದೇಶಕರು, ಅರ್ಥಶಾಸ್ತçಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಿಎನ್‌ಸಿ ದೂರು ದಾಖಲಿಸಿದೆ ಎಂದು ತಿಳಿಸಿದ್ದಾರೆ.

ಕಾವೇರಿ ನದಿ ಪಾತ್ರದ ಹಸಿರು ಹೊದಿಕೆಯನ್ನು ನಾಶಪಡಿಸಲು ಹುನ್ನಾರ ನಡೆಸಲಾಗಿದೆ. ಒಂದು ದೊಡ್ಡ ಭೂಪ್ರದೇಶದ ಪರಿಸರವನ್ನು ನಾಶ ಪಡಿಸಿದಲ್ಲಿ ಅದು ಭೌಗೋಳಿಕ ಅಸಮತೋಲನಕ್ಕೆ ಕಾರಣವಾಗ ಬಹುದು. ಅಲ್ಲಿನ ಶಾಂತಿ, ಪ್ರಶಾಂತತೆ ಮತ್ತು ನೆಮ್ಮದಿ ಭಂಗವಾಗಬಹುದು. ಇಲ್ಲಿ ನಡೆಯುವ ಪ್ರಕ್ರಿಯೆಗಳು ಕೃಷಿ ವಿಜ್ಞಾನಿ ಡಾ.ಸ್ವಾಮಿನಾಥನ್ ಅವರ ಶಿಫಾರಸ್ಸುಗಳಿಗೆ ವಿರುದ್ಧವಾಗಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.