ನಾಪೋಕ್ಲು, ಮೇ ೩: ತರಬೇತುದಾರರ ಮಾರ್ಗದರ್ಶನವನ್ನು ಶಿಬಿರಾರ್ಥಿಗಳು ಪಾಲಿಸುವುದರ ಜೊತೆಗೆ, ಕೆಲಸದಲ್ಲಿ ಏಕಾಗ್ರತೆ ಇರಬೇಕು ಎಂದು ಮಡಿಕೇರಿಯ ವಾಂಡರರ್ಸ್ ಕ್ಲಬ್ ಅಧ್ಯಕ್ಷ, ತರಬೇತುದಾರ, ಐಓಬಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಕೋಟೆರ ಮುದ್ದಪ್ಪ ಹೇಳಿದರು. ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಉಚಿತ ಬೇಸಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡಿರ ನಾಣಯ್ಯ ಮಾತನಾಡಿ, ಜಿಲ್ಲೆಯ ಮಂದಿಗೆ ದೇಶದೆಲ್ಲೆಡೆ ಗೌರವದ ಜೊತೆಗೆ ಹಾಕಿ ಕ್ರೀಡೆಗೆ ವಿಶೇಷ ಪ್ರಾಶಸ್ತö್ಯ ಇದೆ. ಕ್ರೀಡೆಯಲ್ಲಿ ಉತ್ತಮ ತರಬೇತಿ ಹೊಂದುವುದರ ಮೂಲಕ ಮಕ್ಕಳು ಸತ್ಪ್ರಜೆಗಳಾಗಬೇಕು ಎಂದರು. ವಿದ್ಯಾರ್ಥಿಗಳು ಶಿಬಿರದಲ್ಲಿ ತರಬೇತಿ ಪಡೆದು ನಂತರ ಮನೆಯಲ್ಲಿಯೂ ಪ್ರಯತ್ನ ಪಡಬೇಕು. ನುರಿತ ಆಟಗಾರರ ಆಟವನ್ನು ಗಮನಿಸಬೇಕು, ಯಾವುದೇ ವೃತ್ತಿಗೆ ಹೋದರೂ ಕೂಡ ಕ್ರೀಡೆಯನ್ನು ಕಡೆಗಣಿಸಬಾರದು ಎಂದರು.

ಅಕಾಡೆಮಿ ಉಪಾಧ್ಯಕ್ಷ ಕಾಂಡAಡ ಜೋಯಪ್ಪ ಮಾತನಾಡಿ, ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ಅವರ ಶ್ರಮದ ಫಲವಾಗಿ ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ತರಬೇತಿ ಸಿಗುತ್ತಿದೆ. ಮೊಬೈಲ್ ಬಳಸುವುದನ್ನು ದೂರ ಮಾಡಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲಾ ಕ್ರೀಡೆಗಳಿಗೂ ಪ್ರಾಶಸ್ತö್ಯ ಇದೆ. ದೈಹಿಕ ಸಾಮರ್ಥ್ಯ ವೃದ್ಧಿಸಲು ಕ್ರೀಡೆಗಳು ಸಹಕಾರಿ ಎಂದರು. ಅಂತರರಾಷ್ಟಿçÃಯ ಹಾಕಿ ಕ್ರೀಡಾಪಟು ಕುಲ್ಲೇಟಿರ ಉತ್ತಯ್ಯ, ಮಕ್ಕಳಿಗೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.

ಶಿಬಿರದಲ್ಲಿ ಸುಮಾರು ೭೦ಕ್ಕೂ ಅಧಿಕ ಶಿಬಿರಾರ್ಥಿಗಳು ಪ್ರತಿದಿನ ಬೆಳಿಗ್ಗೆ ಏಳುವರೆಯಿಂದ ೯.೩೦ರವರೆಗೆ ಭಾಗವಹಿಸುತ್ತಿದ್ದು, ಇವರಿಗೆ ನುರಿತ ತರಬೇತುದಾರರಿಂದ ಹಾಕಿ ಸೇರಿದಂತೆ ವಿವಿಧ ಕ್ರೀಡಾ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ ಹಾಲು, ಮೊಟ್ಟೆ, ಬಿಸ್ಕೆಟ್ ವಿತರಿಸಲಾಗುತ್ತಿದೆ.

ಈ ಸಂದರ್ಭ ಅಕಾಡೆಮಿ ಕಾರ್ಯದರ್ಶಿ ಹಾಗೂ ತರಬೇತುದಾರ ರಾಗಿ ಕೇಟೋಳಿರ ಡಾಲಿ ಅಚ್ಚಪ್ಪ, ಅರೆಯಡ ಗಣೇಶ್, ಮಾಚೆಟ್ಟಿರ ಕುಶು ಕುಶಾಲಪ್ಪ ಇತರ ನಿರ್ದೇಶಕರು ಪೋಷಕರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.