ದಟ್ಟ-ಕೆಟ್ಟ ಹೊಗೆಯಿಂದ ‘ಮರಣ ಹೋಮ’

ಸೋಮವಾರಪೇಟೆ, ಮೇ ೪: ಶಾಸಕರು-ಸರ್ಕಾರ ಬದಲಾದರೂ ಸೋಮವಾರಪೇಟೆಯ ತ್ಯಾಜ್ಯ ವಿಲೇವಾರಿ ಸಮಸ್ಯೆ ಬದಲಾಗಿಲ್ಲ. ಪಟ್ಟಣದ ಹೃದಯ ಭಾಗದಲ್ಲಿಯೇ ಕಸವನ್ನು ಸುಡಲಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಈ ವಿಚಾರ ಕಾರಣವಾಗಿದೆ.

ಪಂಚಾಯಿತಿಯ ಈ ಕ್ರಮ ದಿಂದಾಗಿ ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ದಟ್ಟ ಹಾಗೂ ಕೆಟ್ಟ ಹೊಗೆ ಏಳುತ್ತಿದ್ದು, ಇದು ಪಟ್ಟಣದ ಜನರಿಗೆ ಪಂಚಾಯಿತಿ ಮಾಡುತ್ತಿರುವ ‘ಮರಣ ಹೋಮ’ ಎಂದು ಸಾರ್ವ ಜನಿಕರಿಂದ ಟೀಕೆ ವ್ಯಕ್ತವಾಗಿದೆ.

ಪಟ್ಟಣದ ಅಂಗಡಿ ಮುಂಗಟ್ಟು, ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಉತ್ಪತ್ತಿಯಾಗುವ ಕಸವನ್ನೆಲ್ಲಾ ತಂದು ಪಟ್ಟಣದ ಹೈಟೆಕ್ ಮಾರುಕಟ್ಟೆಯಲ್ಲಿ ಶೇಖರಿಸಿ ಸಂಜೆಯಾಗುತ್ತಲೇ ಬೆಂಕಿ ಹಚ್ಚಲಾಗುತ್ತಿದೆ. ತರಹೇವಾರಿ ತ್ಯಾಜ್ಯ ಗಳನ್ನು ಸುಡುತ್ತಿರುವುದರಿಂದ ಕೆಟ್ಟ ಹೊಗೆ ದಟ್ಟವಾಗಿ ಹರಡಿ ಇಡೀ ಪ್ರದೇಶವನ್ನು ಆವರಿಸುತ್ತಿದೆ.

ಪಂಚಾಯಿತಿಯ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ಯಾನ್ಸರ್, ಕೆಮ್ಮು, ಸೇರಿದಂತೆ ಇನ್ನಿತರ ರೋಗಳನ್ನು ಹರಡಿಸಲು ಪಟ್ಟಣ ಪಂಚಾಯಿತಿ ಗುತ್ತಿಗೆ ಪಡೆದಿದೆಯೇ? ಎಂದು ತಮ್ಮ ಕೋಪವನ್ನು ಹೊರ ಹಾಕುತ್ತಿದ್ದಾರೆ.ಸೋಮವಾರಪೇಟೆ ಪಟ್ಟಣ ಪ್ಲಾಸ್ಟಿಕ್ ಮುಕ್ತವಾಗಿದೆ. ಆದರೆ ಎಗ್ಗಿಲ್ಲದೆ ಅದರ ಬಳಕೆಯಾಗುತ್ತಿದೆ. ಸ್ವಚ್ಛ ಭಾರತ ಅಭಿಯಾನವೂ ಇಲ್ಲಿ ಹಳ್ಳ ಹಿಡಿದಿದೆ. ಹಲವು ದಶಕಗಳ ಸಮಸ್ಯೆಗೆ ಮುಕ್ತಿ ನೀಡಲು ಜನಪ್ರತಿನಿಧಿಗಳು, ಅಧಿಕಾರಿ ಗಳಿಗೆ ಸಾಧ್ಯವಾಗಿಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ.

ಪಟ್ಟಣದ ಕಸ ವಿಲೇವಾರಿಗೆ ಸಿದ್ದ ಲಿಂಗಪುರದಲ್ಲಿ ಜಾಗ ಖರೀದಿಸಿ, ಕಾಂಪೌAಡ್ ನಿರ್ಮಿಸಲಾಗಿದೆ. ಕಸ ವಿಲೇವಾರಿಗೆ ಬೇಕಾದ ಯಂತ್ರೋ ಪಕರಣಗಳ ಖರೀದಿಗೆ ಟೆಂಡರ್ ಆಹ್ವಾನಿಸುತ್ತಿದ್ದೇವೆ ಎಂದು ಹೇಳಿ ವರ್ಷಗಳು ಕಳೆದಿವೆ. ಈವರೆಗೆ ಯಾವುದೇ ಪ್ರಗತಿ ಕಾಣಲು ಸಾಧ್ಯವಾಗಿಲ್ಲ. ಒಂದು ವೇಳೆ ಪ್ರಗತಿಯಾಗಿದ್ದರೆ ಕಸವನ್ನು ಪಟ್ಟಣದಲ್ಲಿ ಸುಡುವ ಪ್ರಮೇಯವೂ ಬರುತ್ತಿರಲಿಲ್ಲ.

ಈ ಹಿಂದೆ ಪಟ್ಟಣದ ತ್ಯಾಜ್ಯವನ್ನು ಖಾಸಗಿ ವ್ಯಕ್ತಿಯೋರ್ವರ ತೋಟದ ಜಾಗದಲ್ಲಿ ವಿಲೇವಾರಿ ಮಾಡಲಾಗು ತ್ತಿತ್ತು. ಮಾನವೀಯತೆಯ ದೃಷ್ಟಿಯಿಂದ ಜಾಗವನ್ನು ಬಿಟ್ಟುಕೊಟ್ಟಿದ್ದರು. ಆದರೆ ಇದನ್ನು ಉಳಿಸಿಕೊಳ್ಳದ ಪಂಚಾಯಿತಿ, ಪಂಚಾಯಿತಿಗೆ ಒಳಪಡದ ಪ್ರದೇಶ ಗಳಿಂದ, ಹೋಂ ಸ್ಟೇ, ರೆಸಾರ್ಟ್ ಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನೂ ಸಹ ಪಂಚಾಯಿತಿಗೆ ತಂದು ಅಲ್ಲಿಂದ ಪಂಚಾಯಿತಿಯ ವಾಹನಕ್ಕೆ ತುಂಬಿ ಕೊಂಡು ಮಾನವೀಯತೆ ತೋರಿದ್ದ ತೋಟ ಮಾಲೀಕರ ಜಾಗಕ್ಕೆ ತುಂಬಿದರು. ಇದರಿಂದ ಅಸಮಾ ಧಾನಗೊಂಡ ಅವರು, ನಂತರ ಜಾಗ ನೀಡಲು ಹಿಂದೇಟು ಹಾಕಿದರು.

ಇದಾಗಿ ಕೆಲ ವರ್ಷಗಳೇ ಕಳೆದರೂ ಸಹ ಇಂದಿಗೂ ಪಂಚಾ ಯಿತಿಯ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ ನೀಡಲು ಆಡಳಿತ ಮಂಡಳಿ, ಅಧಿಕಾರಿ ವರ್ಗಕ್ಕೆ ಸಾಧ್ಯವಾಗಿಲ್ಲ.

ದಿನದಿಂದ ದಿನಕ್ಕೆ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿ ಸುತ್ತಿದೆ. ಆದಷ್ಟು ಶೀಘ್ರವಾಗಿ ಸಿದ್ದಲಿಂಗಪುರದ ತ್ಯಾಜ್ಯ ವಿಲೇವಾರಿ ಘಟಕವನ್ನು ಪೂರ್ಣಗೊಳಿಸಿ, ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.