ಗೋಣಿಕೊಪ್ಪಲು, ಮೇ ೨: ಕೊಡಗಿನಲ್ಲಿರುವ ಸಣ್ಣ ಸಣ್ಣ ಸಮುದಾ ಯಗಳು ಇತ್ತೀಚೆಗೆ ಕ್ರೀಡೋತ್ಸವದ ಮೂಲಕ ತಮ್ಮ ಸಮಾಜವನ್ನು ಒಗ್ಗೂ ಡಿಸುವ ಪ್ರಯತ್ನಕ್ಕೆ ಮುಂದಾಗಿವೆ. ಕೊಡಗಿನಲ್ಲಿರುವ ಯರವ ಸಮುದಾ ಯವು ಈ ಸಮಾಜದ ಆಸ್ತಿಯಾಗಿದೆ. ನಾಯಕತ್ವ ಗುಣಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜ ದಲ್ಲಿ ಇನ್ನಷ್ಟು ಸಾಧನೆ ಮಾಡಲು ಅವಕಾಶವಾಗಲಿದೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ, ಉದ್ಯಮಿ ಗುಮ್ಮಟ್ಟಿರ ಕಿಲನ್ ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಿತಿಮತಿ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಯರವ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ತಿರುಮುಂಡೆಲಾತ್ತಿಲಾ ಕ್ರಿಕೆಟ್ ಕಪ್‌ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಬಾಂಧವರು ಅದ ರಲ್ಲೂ ವಿಶೇಷವಾಗಿ ಯುವಕರು ಪ್ರತಿ ವರ್ಷ ಕ್ರೀಡೋತ್ಸವವನ್ನು ಯಶಸ್ವಿ ಯಾಗಿ ಮುನ್ನಡೆಸುತ್ತಾ ಬರುತ್ತಿರುವುದು, ಸಮಾಜವನ್ನು ಒಂದು ಗೂಡಿಸುವ ಪ್ರಯತ್ನ ನಡೆಸುತ್ತಿರುವುದು ಆಶಾದಾ ಯಕ ಬೆಳವಣಿಗೆ. ಕೇವಲ ದಾನಿಗಳ ಸಹಾಯದಿಂದ ಕ್ರೀಡೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಸರ್ಕಾರ ಈ ನಿಟ್ಟಿನಲ್ಲಿ ಅನುದಾನ ಒದಗಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ಮಾಡಬೇಕಿದೆ ಎಂದರು.

ಯರವ ಸಮಾಜದ ಅಧ್ಯಕ್ಷ ಪಿ.ಕೆ. ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೧೨ ವರ್ಷಗಳ ಹಿಂದೆ ಶಾಂತ ಕುಮಾರ್‌ರವರು ಸ್ಥಾಪಕ ಅಧ್ಯಕ್ಷರಾಗಿ ಯರವ ಸಮಾಜವನ್ನು ಹುಟ್ಟುಹಾಕುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದ್ದರು. ಇದೀಗ ಅವರ ನೆನಪಿನಲ್ಲಿ ಕ್ರೀಡೋತ್ಸವ ಆಯೋಜಿಸಲಾಗಿದೆ. ಯುವಕರು ಪ್ರತಿವರ್ಷ ಕ್ರೀಡೋತ್ಸವ ನಡೆಸಲು ವಿಶೇಷ ಆಸಕ್ತಿ ವಹಿಸು ತ್ತಿದ್ದಾರೆ. ದಾನಿಗಳು ಯರವ ಸಮುದಾ ಯದ ಜನಾಂಗದ ಮೇಲೆ ಇಟ್ಟಿರುವ ಅಪಾರವಾದ ಪ್ರೀತಿ ವಿಶ್ವಾಸ ಇಂದಿಗೂ ಮುಂದುವರೆಯುತ್ತಿದೆ. ಇವರ ಸಹಕಾ ರದಿಂದ ದೊಡ್ಡ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಕ್ರೀಡೋತ್ಸವ ಉತ್ತಮವಾಗಿ ನಡೆಯುತ್ತಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿ ಸಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಸಮಾಜ ಭಾಂದವರು ಸೋದರತ್ವದಿಂದ ಕ್ರೀಡೆಯನ್ನು ನಡೆಸಬೇಕು. ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ ಪ್ರಕ್ರಿಯೆ. ಎಲ್ಲಾ ತಂಡಗಳು ಗೆಲುವು ಸಾಧಿಸಲು ಸಾಧ್ಯವಿಲ್ಲ. ಕ್ರೀಡೆಯಲ್ಲಿರುವ ಪ್ರತಿಭಾವಂತರು ಮುಂದೆ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾ ಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪಿ.ಆರ್. ಪಂಕಜ, ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿದ್ದರೂ ಸಾಕಷ್ಟು ಸಂಖ್ಯೆ ಯಲ್ಲಿ ಸಮುದಾಯದವರಿಗೆ ಯೋಜನೆ ತಲುಪಿಲ್ಲ. ಸಮಾಜದ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು. ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗ ಳಾಗಿ ಮಾಜಿ ತಾಲೂಕು ಪಂಚಾ ಯತ್ ಸದಸ್ಯರಾದ ಪ್ರಕಾಶ್, ಗಿರಿಜನ ವಿವಿಧೊದ್ದೇಶ ಸಹಕಾರ ಸಂಘದ ಅಧ್ಯಕ್ಷ ಪಿ.ಕೆ. ಮಣಿಕುಂಞ, ಉಪಾಧ್ಯಕ್ಷ ಜೆ.ಆರ್. ಪುಷ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಚುಬ್ರು, ಮುಖಂಡರಾದ ಮಲ್ಲಪ್ಪ, ಮಣಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಮೈದಾನಕ್ಕೆ ಅತಿಥಿಗಳನ್ನು ಯರವ ಸಮುದಾಯದ ಬಾಂಧವರು ಸಾಂಪ್ರದಾಯಿಕವಾಗಿ ದುಡಿಕೊಟ್ಟ್ ಮೂಲಕ ಬರಮಾಡಿಕೊಂಡರು. ಮುಂಜಾನೆ ಸಮಾಜದ ಹಿರಿಯರಾದ ಮಣಿಯವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

-ಹೆಚ್.ಕೆ. ಜಗದೀಶ್