ಮಡಿಕೇರಿ, ಮೇ ೨: ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವವು ತಾ. ೭ ರಂದು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಜರುಗಲಿದೆ ಎಂದು ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೬ ಗಂಟೆಗೆ ದೇವಾಲಯದಲ್ಲಿ ಧ್ವಜಾರೋಹಣದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ೬.೩೦ ಗಂಟೆಗೆ ಗಣಪತಿ ಹೋಮ, ೭.೩೦ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥ ಸ್ನಾನ ನಡೆಯಲಿದೆ. ಬೆಳಿಗ್ಗೆ ೯.೨೦ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹಗಲು ೧೧.೪೫ಕ್ಕೆ ದೇವಿಯ ರಥೋತ್ಸವವು ದೇವಾಲಯದ ಆವರಣದ ಸುತ್ತಲೂ ನೆರವೇರಲಿದ್ದು, ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮಾರ್ಚನೆ ಮತ್ತು ಮಂಗಳಾರತಿ ಜರುಗಲಿದೆ ಎಂದರು.

ಅಪರಾಹ್ನ ೧೨ ಗಂಟೆಗೆ ಅನ್ನದಾನ, ೧೨.೩೦ಕ್ಕೆ ತಾಯಿಯ ದರ್ಶನ, ಸಂಜೆ ೬ ಗಂಟೆಗೆ ದೇವಾಲಯದಲ್ಲಿ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರ ಜರುಗಲಿದ್ದು, ರಾತ್ರಿ ೯ ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ರಥ ಎಳೆಯಲು ಪುರುಷರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಜಾತ್ರೆಗಿಂತ ಎಂಟು ದಿನಗಳ ಮೊದಲು ವ್ರತಪಾಲನೆ ಮಾಡಬೇಕು. ಅಲ್ಲದೆ ಆ ದಿನ ದೇವಾಲಯದಲ್ಲಿ ತೀರ್ಥಸ್ನಾನ ಮಾಡಿ ಬಿಳಿಪಂಚೆ ಹಾಗೂ ಕೆಂಪು ಮೇಲು ಹೊದಿಕೆ ಧರಿಸಿದವರಿಗೆ ಮಾತ್ರ ರಥ ಎಳೆಯಲು ಅವಕಾಶ ನೀಡಲಾಗುವುದೆಂದು ಗೋವಿಂದ ಸ್ವಾಮಿ ಹೇಳಿದರು.

ದೇವಾಲಯ ಆಡಳಿತ ಮಂಡಳಿ ಸದಸ್ಯ ಜಿ. ಕಿರಣ್ ಕುಮಾರ್ ಮಾತನಾಡಿ, ಸುಮಾರು ೫ ಸಾವಿರ ಭಕ್ತಾದಿಗಳು ವಾರ್ಷಿಕೋತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ದೂರದಿಂದ ಬರುವ ಭಕ್ತಾದಿಗಳಿಗೆ ತಂಗಲು ಸ್ಥಳದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಆಡಳಿತ ಮಂಡಳಿ ಸದಸ್ಯ ಸಚಿನ್ ಮಾತನಾಡಿ, ರಥೋತ್ಸವದಲ್ಲಿ ಭಕ್ತರು ದೇವಿಯ ರಥವನ್ನು ಎಳೆದರೆ, ೧೫ ವರ್ಷದೊಳಗಿನ ೫೦ ಕ್ಕೂ ಹೆಚ್ಚು ಹೆಣ್ಮಕ್ಕಳು ಕಳಸ ಹೊತ್ತು ರಥದೊಂದಿಗೆ ಸಾಗಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಆಡಳಿತ ಮಂಡಳಿ ಸದಸ್ಯರಾದ, ಪ್ರಶಾಂತ್ ಮತ್ತು ಭಕ್ತರಾದ ಚುಮ್ಮಿ ದೇವಯ್ಯ ಉಪಸ್ಥಿತರಿದ್ದರು.