ವಿಶೇಷ ವರದಿ: ಎಂ.ಎನ್. ಚಂದ್ರಮೋಹನ್
ಕುಶಾಲನಗರ, ಮೇ ೩ : ಜೀವನದಿ ಕಾವೇರಿ ದಕ್ಷಿಣ ಭಾರತದ ಜೀವ ಸಂಕುಲಗಳ ಸಂಜೀವಿನಿಯಾಗಿದ್ದರೂ ಕಳೆದ ಕೆಲವು ವರ್ಷಗಳಿಂದ ಕಾವೇರಿಯ ಕೂಗು ಮಾತ್ರ ಯಾರಿಗೂ ಕೇಳಿಸುತ್ತಿಲ್ಲ.
ಕೊಡಗು ಜಿಲ್ಲೆಯಲ್ಲಿ ಹುಟ್ಟಿ ಲಕ್ಷಾಂತರ ಜನರಿಂದ ಪೂಜಿಸಲ್ಪಟ್ಟು ಜಿಲ್ಲೆಯ ಗಡಿ ದಾಟಿ ರಾಜ್ಯದ ಹಲವು ಜಿಲ್ಲೆಗಳ ಮೂಲಕ ಹರಿದು ತಮಿಳುನಾಡು ರಾಜ್ಯ ಸೇರಿದಂತೆ ದಕ್ಷಿಣ ಭಾರತದ ಜೀವನದಿ ಎಂದೇ ಕರೆಯುವ ನದಿಯ ಸಂರಕ್ಷಣೆಯ ಬಗ್ಗೆ ಮಾತ್ರ ರಾಜ್ಯ ಸರ್ಕಾರವಾಗಲಿ, ಕೇಂದ್ರವಾಗಲಿ ಯಾವುದೇ ರೀತಿಯಲ್ಲಿ ಕನಿಷ್ಟ ಸ್ಪಂದನ ನೀಡದಿರುವುದು ಜನಪ್ರತಿನಿಧಿಗಳು ಅಧಿಕಾರಿಗಳ ನಿರ್ಲಕ್ಷತೆಗೆ ಹಿಡಿದ ಕೈಗನ್ನಡಿ ಎನ್ನಬಹುದು.
ಕಳೆದ ಎರಡು ದಶಕಗಳಿಂದ ಕಾವೇರಿ ಮೂಲದಿಂದಲೇ ಕಲುಷಿತಗೊಂಡು ಹರಿಯುವ ಪರಿಸ್ಥಿತಿಗೆ ಒಳಗಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ರೀತಿಯಲ್ಲಿ ಕನಿಷ್ಟ ಯೋಜನೆಗಳನ್ನು ಕೂಡ ರೂಪಿಸುವಲ್ಲಿ ನಿರ್ಲಕ್ಷö್ಯ ತಾಳಿರುವುದು ಕಂಡುಬರುತ್ತಿದೆ.
ಕಳೆದ ೨೦೧೦ ರಿಂದ ರಾಜ್ಯ ಮತ್ತು ತಮಿಳುನಾಡಿನ ಸಾಧುಸಂತರುಗಳು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಸೇರಿ ಕಾವೇರಿ ನದಿ ದಂಡೆಯ ಯಾತ್ರೆಯೊಂದಿಗೆ ನದಿಯ ಸಮಗ್ರ ಮಾಹಿತಿಯೊಂದಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಪತ್ರ ಸಲ್ಲಿಸುವ ಮೂಲಕ ನದಿ ಸಂರಕ್ಷಣೆಗೆ ಕೋರಿಕೆ ಸಲ್ಲಿಸಿದರೂ ಇದುವರೆಗೂ ಸರ್ಕಾರದಿಂದ ಯಾವುದೇ ರೀತಿಯ ಕ್ರಿಯಾ ಯೋಜನೆ ರೂಪುಗೊಂಡಿಲ್ಲ.
ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಗಡಿ ಗುರುತು ಸರ್ವೇ ಮಾಡುವ ಮೂಲಕ ನದಿಯ ಸಂರಕ್ಷಣೆ ಮತ್ತು ನದಿ ತಡೆಗಳ ಅಭಿವೃದ್ಧಿ ಹಾಗೂ ನದಿ ತಟದಲ್ಲಿ ನೆಲೆ ಕಂಡಿರುವ ಜನರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸರ್ಕಾರಕ್ಕೆ ಯೋಜನೆ ರೂಪಿಸಲು ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು.
ಇದರೊಂದಿಗೆ ನದಿ ಸಂರಕ್ಷಣೆಗೆ ಕಾನೂನು ರೂಪಿಸಿ ಅನುಷ್ಠಾನಗೊಳಿಸುವಂತೆ ಕೋರಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮೂಲಕ ನಿಯೋಗ ತೆರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ನದಿಯ ಮೂಲ ಅಸ್ತಿತ್ವವನ್ನು ಕಾಪಾಡುವ ಮೂಲಕ ನದಿ ತಟದ ಗ್ರಾಮ ಪಟ್ಟಣಗಳ ಅಭಿವೃದ್ಧಿ ಮಾಡುವುದು. ನದಿ ತಟಗಳು ಅಕ್ರಮವಾಗಿ ಒತ್ತುವರಿಯಾಗುವುದರೊಂದಿಗೆ ಕಲುಷಿತ ತ್ಯಾಜ್ಯಗಳು ನೇರವಾಗಿ ನದಿ ಒಡಲು ಸೇರುವುದನ್ನು ತಪ್ಪಿಸಲು ಅಗತ್ಯ ಕ್ರಿಯಾಯೋಜನೆಗಳನ್ನು ರೂಪಿಸಲು ಕಳೆದ ೧೨ ವರ್ಷಗಳ ಅವಧಿಯಲ್ಲಿ ರಾಜ್ಯದ ಸುಮಾರು ಏಳು ಮಂದಿ ಮುಖ್ಯಮಂತ್ರಿಗಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ಇದುವರೆಗೂ ಆಗಿಲ್ಲ.
ಕೇವಲ ಮನವಿ ಪತ್ರಕ್ಕೆ ಉತ್ತರ ಬರೆದು ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಮತ್ತು ಸಂಬAಧಿಸಿದ ಇಲಾಖೆಯ ಗಮನಕ್ಕೆ ಕಳಿಸಿಕೊಡಲಾಗಿದೆ ಎನ್ನುವ ಉತ್ತರವಷ್ಟೇ ಮುಖ್ಯಮಂತ್ರಿಗಳ ಕಚೇರಿಯಿಂದ ಲಭಿಸುತ್ತಿದೆ.
ಉತ್ತರದ ಗಂಗಾ ನದಿಯ ಸಂರಕ್ಷಣೆಗೆ ಕೇಂದ್ರ ಸರ್ಕಾರ ರೂಪಿಸಿರುವ ನಮಾಮಿ ಗಂಗಾ ಯೋಜನೆಯಂತೆ ದಕ್ಷಿಣದ ಕಾವೇರಿಗೆ ನಮಾಮಿ ಕಾವೇರಿ ಯೋಜನೆ ರೂಪಿಸಿ ನದಿ ಅಸ್ತಿತ್ವ ಉಳಿಸುವುದರೊಂದಿಗೆ ನದಿ ತಟಗಳ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ತೆರಳಿ ಪ್ರಧಾನ ಮಂತ್ರಿಗಳು ಸೇರಿದಂತೆ ಹಲವು ಪ್ರಮುಖ
(ಮೊದಲ ಪುಟದಿಂದ) ಸಚಿವರುಗಳಿಗೂ ಮನವಿ ಮಾಡಲಾಗಿತ್ತು. ಮನವಿ ನೀಡಿ ೮ ವರ್ಷಗಳಾದರೂ ಇದುವರೆಗೂ ಯಾವುದೇ ರೀತಿಯ ಕ್ರಮ ಕಂಡುಬAದಿಲ್ಲ.
ಕರ್ನಾಟಕ ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಏಳು ಮಂದಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾವೇರಿ ನದಿ ಸಂರಕ್ಷಣೆಗೆ ಅಗತ್ಯ ಯೋಜನೆಗಳನ್ನು ರೂಪಿಸುವಂತೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಸರ್ಕಾರ ಬಜೆಟ್ ನಲ್ಲಿ ಯಾವುದೇ ರೀತಿಯ ಅನುದಾನ ಕೂಡ ಕಲ್ಪಿಸಿಲ್ಲ.
ಕೇವಲ ನೀರಿನ ಪಾಲಿಗಾಗಿ ಎರಡು ರಾಜ್ಯಗಳು ವ್ಯಾಜ್ಯಗಳೊಂದಿಗೆ ತಮ್ಮ ಅಧಿಕಾರವನ್ನು ಕೇಳುತ್ತಿದೆಯೇ ಹೊರತು ನದಿ ಸಂರಕ್ಷಣೆಯ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ.
ಕೊಡಗು ಜಿಲ್ಲೆಯ ಮಟ್ಟಕ್ಕೆ ಹೇಳುವುದಾದರೆ ಕೊಡಗು ಜಿಲ್ಲೆಯಲ್ಲಿ ಕಳೆದ ೧೪ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಹಲವು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಕಾವೇರಿಯ ಸಂರಕ್ಷಣೆ ಮಾಡುವಂತಹ ಯೋಜನೆಗಳನ್ನು ರೂಪಿಸಲು ಕೋರಿದರೂ, ಅದಕ್ಕೂ ಇನ್ನೂ ಕಾಲ ಕೂಡಿ ಬಂದಿಲ್ಲ.
ನದಿ ಸಂರಕ್ಷಣೆಯ ಹೊಣೆಯನ್ನು ಕಂದಾಯ ಇಲಾಖೆ ಸೇರಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅರಣ್ಯ ಇಲಾಖೆ, ಪರಿಸರ ಇಲಾಖೆ ಮತ್ತು ಸ್ಥಳೀಯ ಆಡಳಿತಗಳ ಹೊಣೆಯಾಗಿದ್ದರೂ, ಯಾವ ಇಲಾಖೆಯ ಅಧಿಕಾರಿಗಳು ಕೂಡ ಈ ಬಗ್ಗೆ ಕನಿಷ್ಠ ಕಾಳಜಿ ತೋರಿಸುತ್ತಿಲ್ಲ. ಉದಾಹರಣೆಗೆ ಹೇಳುವುದಾದಲ್ಲಿ, ಜಿಲ್ಲೆಯ ಪ್ರವೇಶ ದ್ವಾರ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಭಾರಿ ಪ್ರಮಾಣದಲ್ಲಿ ಕಲುಷಿತ ನೀರು ಚರಂಡಿ ಮೂಲಕ ಹರಿದು ನದಿ ಸೇರಿ ಅಸಹ್ಯ ವಾಸನೆಯೊಂದಿಗೆ ಮೂಗುಮುಚ್ಚಿ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದರೂ, ಜಿಲ್ಲೆಯ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಮೌನ ವ್ರತ ತಾಳಿರುವುದು ನಿಜವಾಗಿಯೂ ಬೇಸರದ ಸಂಗತಿ ಎನ್ನಬಹುದು.
ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ತಟದಲ್ಲಿ ಒಂದು ಪುರಸಭೆ ಸೇರಿದಂತೆ ೨೨ ಗ್ರಾಮ ಪಂಚಾಯಿತಿಗಳು ಅಸ್ತಿತ್ವದಲ್ಲಿದ್ದು ನದಿ ತಟದ ಅಥವಾ ನದಿಯ ಬಗ್ಗೆ ಯಾವುದೇ ಕಾಳಜಿ ವಹಿಸದೆ ಅಲ್ಲಿಂದ ಹೊರ ಸೂಸುವ ಕಲುಷಿತ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹರಿಸುತ್ತಿದೆ.
ತಲಕಾವೇರಿಯಲ್ಲಿ ತೀರ್ಥರೂಪದಲ್ಲಿ ಸ್ವೀಕರಿಸಲಾಗುತ್ತಿರುವ ಪವಿತ್ರ ಕಾವೇರಿ ನದಿಯ ನೀರಿನ ಗುಣಮಟ್ಟ ಮೂಲ ಕಾವೇರಿಯಿಂದ ಕೆಲವೇ ದೂರದ ಅಂತರದಲ್ಲಿ ಕಲುಷಿತಗೊಂಡು ನದಿ ನಡುವೆ ಬಾಟಲ್ ನೀರಿಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರಾಕೃತಿಕವಾಗಿ ನದಿಯೊಂದು ಹರಿಯುತ್ತಿದ್ದರೂ ನದಿ ತಟದ ಜನತೆಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರಿನ ಕೊರತೆ ಮೂಲ ಕಾವೇರಿಯ ವ್ಯಾಪ್ತಿಯಲ್ಲಿ ಕಂಡುಬರುತ್ತಿದೆ.
ಕಾವೇರಿ ಹರಿಯುವ ಮಡಿಕೇರಿ ವೀರಾಜಪೇಟೆ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಆಗಬೇಕಾದ ಅಗತ್ಯ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬAಧಿಸಿದ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ರೀತಿಯ ಸ್ಪಂದನ ಕಂಡುಬAದಿಲ್ಲ.
ನದಿ ತಟದ ಪಟ್ಟಣ, ಗ್ರಾಮಗಳಲ್ಲಿ ಒಳಚರಂಡಿ ಯೋಜನೆಗಳು ಇನ್ನೂ ಅನುಷ್ಠಾನಗೊಳ್ಳದೆ ಇರುವ ಕಾರಣ ಇಡೀ ಗ್ರಾಮ ಪಟ್ಟಣಗಳ ಕಲುಷಿತ ತ್ಯಾಜ್ಯ ನೇರವಾಗಿ ನದಿ ಸೇರಿ ಹರಿಯುವ ಕಾರಣ ನದಿ ನೀರಿನ ಗುಣಮಟ್ಟ ಸಂಪೂರ್ಣ ಕುಸಿಯುತ್ತಿದೆ.
ಕಾವೇರಿ ನದಿ ತಟದಲ್ಲಿ ಪ್ರವಾಸ ಕೇಂದ್ರಗಳು ತಲೆಯೆತ್ತಿದ್ದರೂ ಅಲ್ಲಿ ನಿತ್ಯ ಬರುವ ಸಾವಿರಾರು ಸಂಖ್ಯೆಯ ಪ್ರವಾಸಿಗರಿಗೆ ಅಗತ್ಯವಿರುವ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ.
ನದಿಯ ನಿರ್ವಹಣೆ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಭೀತಿ ಎದುರಿಸುತ್ತಿದ್ದರೆ, ಬೇಸಿಗೆ ಅವಧಿಯಲ್ಲಿ ನದಿ ಸಂಪೂರ್ಣ ಬತ್ತಿ ಹೋಗುತ್ತಿರುವ ದೃಶ್ಯಗಳು ಎದುರಾಗುತ್ತಿವೆ. ನದಿಯ ಆಯ್ದ ಪ್ರದೇಶಗಳಲ್ಲಿ ಚೆಕ್ ಡ್ಯಾಮ್ಗಳನ್ನು ನಿರ್ಮಿಸುವ ಮೂಲಕ ಅಗತ್ಯವಿರುವ ನೀರಿನ ಸಂಗ್ರಹ ಹಾಗೂ ನದಿ ತಟಗಳಲ್ಲಿ ಭೂಮಿಯಲ್ಲಿ ಅಂತರ್ಜಲ ಏರಿಕೆ ಮಾಡುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಇನ್ನೂ ಸ್ಥಳೀಯ ಆಡಳಿತಗಳು ತಲೆಕೆಡಿಸಿಕೊಂಡAತಿಲ್ಲ.
ಬೇಸಿಗೆ ಬಂತೆAದರೆ ಸಾಕು, ನದಿ ತಟದ ಗ್ರಾಮ ಪಟ್ಟಣಗಳಲ್ಲಿ ನಾಗರಿಕರಿಂದ ನೀರಿಗೆ ಹಾಹಾಕಾರ ಕಂಡುಬರುತ್ತಿರುವುದು ಕಳೆದ ಹಲವು ವರ್ಷಗಳಿಂದ ಸಾಮಾನ್ಯವಾದರೂ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಮಾತ್ರ ಜಿಲ್ಲೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿವೆ. ಸರ್ಕಾರಗಳು ಬದಲಾದಂತೆ ಸ್ಥಳೀಯ ಅಧಿಕಾರಿಗಳು ಬದಲಾಗಿ ಈ ನಡುವೆ ನದಿಯ ರೂಪಗಳು ಕೂಡ ಬದಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಆದಷ್ಟು ಶೀಘ್ರದಲ್ಲಿ ಜೀವನದಿ ಕಾವೇರಿ ಹರಿಯುವ ಪ್ರದೇಶಗಳಲ್ಲಿ ಅಗತ್ಯವಿರುವ ಕ್ರಿಯಾ ಯೋಜನೆಗಳನ್ನು ರೂಪಿಸಿ ನದಿಯ ಸಂರಕ್ಷಣೆ ಮಾಡುವ ಸಂಬAಧ ಜಿಲ್ಲಾಡಳಿತ ಹಾಗೂ ಸರ್ಕಾರ ಅಗತ್ಯವಿರುವ ಕಾರ್ಯ ಯೋಜನೆ ರೂಪಿಸಬೇಕಾಗಿದೆ.