ಶನಿವಾರಸಂತೆ, ಮೇ ೨: ಮನುಷ್ಯತ್ವ ಇರುವ ಮಾನವ ಜನ್ಮ ಸಾರ್ಥಕತೆಗೆ ದೇವಾಲಯಗಳ ಪ್ರತಿಷ್ಠಾಪನೆಯೂ ದಾರಿದೀಪವಾಗು ತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ-ಕೊಡಗು ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಸಮೀಪದ ಮೂದರವಳ್ಳಿ ಗ್ರಾಮದಲ್ಲಿ ಶ್ರೀಈಶ್ವರ ಹಾಗೂ ಶ್ರೀಕಟ್ಟೆ ಬಸವಣ್ಣ ಸೇವಾ ಸಮಿತಿ ವತಿಯಿಂದ ಜರುಗಿದ ಶ್ರೀಈಶ್ವರ ಹಾಗೂ ಶ್ರೀಕಟ್ಟೆ ಬಸವಣ್ಣಸ್ವಾಮಿ ನೂತನ ದೇವಸ್ಥಾನಗಳ ಪ್ರತಿಷ್ಠಾಪನೆ ನಂತರ ನಡೆದ ಧಾರ್ಮಿಕ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಹುಟ್ಟು-ಸಾವಿನ ನಡುವಿನ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಮಾರ್ಗದರ್ಶನ, ತಿಳುವಳಿಕೆ, ಜ್ಞಾನ ಬೇಕು.ಜ್ಞಾನ ದೀವಿಗೆಯನ್ನು ಬೆಳಗಿಸಿ ಮನಸ್ಸನ್ನು ಶುದ್ಧಿಗೊಳಿಸಿ, ಜೀವಮಾನವಿಡಿ ದೈವಭಕ್ತಿಯಲ್ಲಿದ್ದು ಜನ್ಮವನ್ನು ಸುಂದರ ಮತ್ತು ಸಾರ್ಥಕ ಪಡಿಸಿಕೊಳ್ಳಬೇಕು. ಒಳಿತು-ಕೆಡುಕಗಳ ಸ್ವಚ್ಛತೆಗೆ ಮೊದಲಿಗೆ ಮನಸ್ಸಿನ ಕನ್ನಡಿಯನ್ನು ಸ್ವಚ್ಛಗೊಳಿಸಬೇಕು. ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ.. ಎನ್ನುವ ಹಾಗೆ ಹೆಣ್ಣು ಮಕ್ಕಳಿರುವ ಮನೆಯಲ್ಲಿ ದೇವರು ನೆಲೆಸುತ್ತಾರೆ. ಮನೆಯಿಡಿ ದೇವಾಲಯವಾದರೆ ಎಲ್ಲಾ ದೇವತೆಗಳು ನೆಲೆಸುತ್ತಾರೆ. ಮನಸ್ಸು ಪರಿಶುದ್ಧವಾಗಿದ್ದರೆ ಎಲ್ಲಾ ಕಡೆ ಭಗವಂತನನ್ನು ಕಾಣಬಹುದು. ಕ್ರೋಧವನ್ನು ನಾಶ ಮಾಡಿ, ದ್ವೇಷಭಾವ ತ್ಯಜಿಸಿದರೆ ಪ್ರೀತಿ, ಶ್ರದ್ಧೆಯಿಂದ ಇರಬಹುದು ಎಂದು ಕರೆ ನೀಡಿದರು. ಆಧ್ಯಾತ್ಮಿಕ ಚಿಂತನೆಯ ಜೊತೆಗೆ ಮುಗ್ಧತೆ ಮತ್ತು ನಂಬಿಕೆಯಿAದ ಭಗವಂತನನ್ನು ಕಾಣುವ ಭರವಸೆಯ ಮಕ್ಕಳಾಗಬೇಕು. ಮಕ್ಕಳಿಗೆ ಧಾರ್ಮಿಕ ಆಚರಣೆಗಳನ್ನು ಹೇಳಿಕೊಡಬೇಕು ತಂದೆ-ತಾಯಿ, ಗುರುಹಿರಿಯರ ಬಗ್ಗೆ ಭಕ್ತಿ-ಗೌರವ ಇರಬೇಕು. ಅನ್ನಕ್ಕೆ, ಮನುಷ್ಯ ಜನ್ಮಕ್ಕೆ ಮಹತ್ವ ಕೊಡಬೇಕು.ದೇವಾಲಯ ನಿರ್ಮಿಸಿದರೆ ಸಾಲದು; ನಿತ್ಯ ದೇವಾಲಯಕ್ಕೆ ಹೋಗಿ ದೇವರಾಗಬೇಕು. ಗುರು ತೋರಿದ ದಾರಿಯಲ್ಲಿ ಸಾಗಿದಾಗ ಮನಸ್ಸುಗಳು ಒಂದಾಗಿ ಸುಂದರ ದೇವಾಲಯ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ದೇವಾಲಯಗಳಾಗಲೀ ಯಾವುದೇ ಸಮಾಜಮುಖಿ ಕೆಲಸಗಳಾಗಲಿ ಗ್ರಾಮಸ್ಥರ ಒಗ್ಗಟ್ಟು ಮತ್ತು ಸಹಕಾರ ಮುಖ್ಯವಾಗಿರುತ್ತದೆ. ದೇವಾಲಯ ಕಟ್ಟುವುದು ಮುಖ್ಯವಲ್ಲ; ನಂತರ ಅದನ್ನು ನಿರ್ವಹಿಸಿಕೊಂಡು ಹೋಗುವುದು, ಗೌರವ ಕಾಪಾಡುವುದು ಮುಖ್ಯ. ಮನಸ್ಸಿನಲ್ಲಿ ದೇವರನ್ನು ಕಾಣುವಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಉತ್ತಮ ಗುಣಗಳನ್ನು ಬೆಳೆಸಿಕೊಂಡಾಗ ಉತ್ತಮ ವ್ಯಕ್ತಿಗಳಾಗಬಹುದು ಎಂದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ವಿಸ್ತಾರವಾದ ಪ್ರಪಂಚದಲ್ಲಿ ದೇವರನ್ನು ಕಾಣಲು ಸಾಧ್ಯವಿಲ್ಲ. ಮನಸ್ಸಿನಲ್ಲಿ ದೇವರನ್ನು ಕಂಡುಕೊಳ್ಳುವAತಹ ಸನ್ನಿವೇಶವನ್ನು ಸೃಷ್ಟಿಮಾಡಿಕೊಳ್ಳಬೇಕು. ಮನುಷ್ಯ ಮಾಡಿದ ದಾನಧರ್ಮದಿಂದ ಹಾಗೂ ಮಾಡುವ ಕಾಯಕ ಕರ್ತವ್ಯದಿಂದ ದೇವರನ್ನು ಕಾಣಬಹುದು. ಮೂದರವಳ್ಳಿ ಗ್ರಾಮಸ್ಥರ ಒಗ್ಗಟ್ಟು, ಸತತ ಪ್ರಯತ್ನ ಹಾಗೂ ಶ್ರದ್ಧೆಯಿಂದ ಎರಡು ದೇವಸ್ಥಾನಗಳ ಪ್ರತಿಷ್ಠಾಪನೆಯಾಗಿದೆ ಎಂದರು. ಕೊಡ್ಲಿಪೇಟೆಯ ವಕೀಲ ಸಿ.ಬಿ. ಪುಟ್ಟರಾಜ್ ಹಾಗೂ ಚಂಗಡಹಳ್ಳಿಯ ಜಯಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀಈಶ್ವರ ಮತ್ತು ಶ್ರೀಕಟ್ಟೆ ಬಸವಣ್ಣಸ್ವಾಮಿ ಸೇವಾ ಸಮಿತಿ ವತಿಯಿಂದ ಅರ್ಚಕ ಮಣಿಕಂಠ ಮತ್ತು ತಂಡದವರ ನೇತೃತ್ವದಲ್ಲಿ ಶಂಭುನಾಥ ಸ್ವಾಮೀಜಿಯವರ ಪಾದಪೂಜೆಯನ್ನು ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ನೆರವೇರಿಸ ಲಾಯಿತು. ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ದಾನಿಗಳನ್ನು, ಗಣ್ಯರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಶ್ರೀಕಟ್ಟೆ ಬಸವಣ್ಣಸ್ವಾಮಿ ದೇವಸ್ಥಾನ ಅಧ್ಯಕ್ಷ ಎಂ.ಎ. ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹಾಗೂ ದಾನಿಗಳಾದ ಬಾಗೇರಿ ಮಧು, ಸಿಂಗನಕುಪ್ಪೆ ಗಂಗಾಧರಪ್ಪ, ನಿಲು ವಾಗಿಲು ಮಂಜಣ್ಣ, ಬೆಂಗಳೂರಿನ ಅರುಣ್ ಕೊತ್ತನಳ್ಳಿ, ಕಾಫಿ ಬೆಳೆಗಾರ ರಾದ ಕಳಳೆ ಕೃಷ್ಣೇಗೌಡ, ಶುಂಠಿ ಭರತ್ ಕುಮಾರ್, ಬೆಟ್ಟದಳ್ಳಿ ಮೂರ್ತಿ, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಡಿವೈಎಸ್ಪಿ ಗಂಗಾಧರಪ್ಪ, ಶ್ರೀ ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಪಿ. ದಿನೇಶ್, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇ.ಸಿ. ಸುಧಾ, ಸದಸ್ಯೆ ಸುವರ್ಣ, ಕಸಾಪ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್, ಕಾರ್ಯ ದರ್ಶಿ ಮೋಹನ್, ದೇವಾಲಯ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.