ಕಣಿವೆ, ಮೇ ೨: ಮಳೆ ಇಲ್ಲದ ಪರಿಣಾಮ ತಲಕಾವೇರಿಯಿಂದ ಜಿಲ್ಲೆಯ ಉದ್ದಕ್ಕೂ ಜೀವನದಿ ಕಾವೇರಿ ಹರಿವು ಸ್ಥಗಿತಗೊಳಿಸಿ ಎರಡು ತಿಂಗಳು ಸಮೀಪಿಸಿತು.
ನದಿಯುದ್ದಕ್ಕೂ ಎಲ್ಲಿಯೂ ನೀರಿನ ಹರಿವಿನ ಸದ್ದು ಕೇಳಿಸದು. ಕಾಣಿಸದು. ಆದರೆ, ಕಣಿವೆ ರಾಮಲಿಂಗೇಶ್ವರ ದೇವಾಲಯದ ದಂಡೆಯಲ್ಲಿ ಕಾವೇರಿ ಜುಳು ಜುಳು ನಾದಗೈಯುತ್ತಾ ಹರಿಯುತ್ತಿರುವ ಚಿತ್ರಣ ದೇವಾಲಯದ ದರ್ಶನಕ್ಕೆ ಧಾವಿಸಿದವರಿಗೆ ಗೋಚರಿಸುತ್ತಿದೆ. ಕಾರಣ ಇಷ್ಟೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಕುಶಾಲನಗರ ತಾಲೂಕಿನ ಹನ್ನೆರಡು ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಯನ್ನು ಹೆಬ್ಬಾಲೆ ಬಳಿ ಅಳವಡಿಸಿರುವುದರಿಂದ ನದಿಯೊಳಗೆ ನೀರೆತ್ತುವ ಕೊಳವೆ ಬಾವಿಗೆ ನೀರು ಹರಿಸಿ ಜನರಿಗೆ ಕುಡಿವ ನೀರು ಒದಗಿಸಲು ಹಾರಂಗಿ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಸುತ್ತಿರುವ ಕಾರಣ ಹಳೆ ಕೂಡಿಗೆಯಿಂದ ಕಣಿವೆಯತ್ತ ನದಿಯಲ್ಲಿ ನೀರು ಹರಿಯುತ್ತಿದೆ.
ಆದಾಗ್ಯೂ ಕುಡಿಯುವ ನೀರಿಗೆ ಜನ ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ಹರಿಸುತ್ತಿರುವ ನೀರನ್ನು ಪಿರಿಯಾಪಟ್ಟಣ ತಾಲೂಕಿನ ಗಡಿಯಂಚಿನ ಗ್ರಾಮಗಳ ಕೆಲ ಮಂದಿ ರಾತೋ ರಾತ್ರಿ ಶುಂಠಿಯ ಹೊಲ ಗದ್ದೆಗಳಿಗೆ ಹರಿಸುತ್ತಿರುವುದು ಕಂಡುಬರುತ್ತಿದೆ.