ನಾಪೋಕ್ಲು, ಏ. ೨೯: ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಪ್ರತಿಯೊಬ್ಬರೂ ಪ್ರಾಮುಖ್ಯತೆ ನೀಡಿದರೆ ಮಾತ್ರ ಶಾಂತಿಯಿAದ ಉತ್ತಮ ಜೀವನ ಸಾಗಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ಹೇಳಿದರು.

ನಾಪೋಕ್ಲು ಬಳಿಯ ಎಮ್ಮೆಮಾಡು ಮಖಾಂ ಉರೂಸ್ ನ ಅಂಗವಾಗಿ ನಡೆದ ಸಾರ್ವಜನಿಕ ಸಮ್ಮೇಳನದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದರು.

ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಶಹೀದ್ ಅವರ ಜೀವನ ಚರಿತ್ರೆ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಶತಮಾನಗಳ ಹಿಂದಿನ ಜೀವನ ಚರಿತ್ರೆಯಾಗಿದೆ. ಇಸ್ಲಾಂ ಧರ್ಮವು ಶಾಂತಿಯ ಧರ್ಮವಾಗಿದ್ದು ಇಲ್ಲಿ ಯಾರಿಗೂ ಅಶಾಂತಿಯನ್ನು ಮೂಡಿಸಲು ಕಲಿಸಿಕೊಟ್ಟಿಲ್ಲ. ನಮ್ಮ ರಾಜ್ಯದ ವಿವಿಧ ಜಿಲ್ಲೆಗಳ ದರ್ಗಾ ಮತ್ತು ದೇವಾಲಯಗಳಲ್ಲಿ ಸಾಮರಸ್ಯದಿಂದ ಉತ್ಸವಗಳನ್ನು ಆಚರಿಸುತ್ತಾರೆ. ಇದು ಹಿಂದಿನ ಕಾಲದಿಂದಲೂ ರಾಜ್ಯದ ಕೆಲವು ಕಡೆಗಳಲ್ಲಿ ಎಲ್ಲಾ ಧರ್ಮದವರು ಒಗ್ಗೂಡಿಸಿ ಸಾಮರಸ್ಯದಿಂದ ಉತ್ಸವಗಳನ್ನು ಆಚರಿಸುವಂತಹ ಪದ್ಧತಿಯಾಗಿದೆ. ಕೆಲವು ಕಡೆಗಳಲ್ಲಿ ಈಗಲೂ ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದ ಕೆಲವು ಮಂದಿರಗಳಲ್ಲಿ ಮುಸ್ಲಿಮರ ಮೊಹರಂ, ಈದ್ ಆಚರಣೆ ನಡೆಯುತ್ತದೆ,

ಅದೇ ರೀತಿ

(ಮೊದಲ ಪುಟದಿಂದ) ದರ್ಗಾಗಳಲ್ಲಿ ದೇವರ ಪೂಜೆಗಳು ನಡೆಯುತ್ತದೆ. ದರ್ಗಾ ಮತ್ತು ಮಂದಿರದ ವಠಾರಗಳಲ್ಲಿ ಕುರುಹುಗಳು ಸಿಕ್ಕಿದರೆ ಅದು ನಮ್ಮದು ಎಂಬ ಮೌಢ್ಯವನ್ನು ಯಾವತ್ತೂ ತೋರಿಸಬಾರದು ಎಂದ ಅವರು ದೇಶ ಮತ್ತು ರಾಜ್ಯದಲ್ಲಿ ಕೆಲವು ಮಾಧ್ಯಮಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಕೆಡುವಂತಹ ಪರಿಸ್ಥಿತಿ ಉದ್ಭವವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಧ್ಯಮದಲ್ಲಿ ಬರುವುದೆಲ್ಲ ನಿಜವಲ್ಲ , ಕೆಲವು ರಾಜಕಾರಣಿಗಳೇ ಪರಸ್ಪರ ದ್ವೇಷ ಹರಡಲು ಮುಖ್ಯ ಕಾರಣ ಕರ್ತರಾಗಿದ್ದಾರೆ.

ಸೂಫಿಗಳು, ಶರಣರು ಒಂದಾಗಿ ಹಿಂದೂ ಮುಸಲ್ಮಾನರು ಎಂಬ ಬೇಧ ಭಾವ ಇಲ್ಲದೆ ಬಾಳಿದ ಈ ನಾಡಿನಲ್ಲಿ ಇದೀಗ ಎಲ್ಲಾ ಅಪರಾಧಗಳಲ್ಲಿ ಧರ್ಮ ಹುಡುಕುವ ನೀಚ ವಿಕೃತ ಮನಸ್ಥಿತಿ ಹೆಚ್ಚಾಗಿದೆ. ಈ ರೀತಿಯ ಮನಸ್ಥಿತಿ ಯಾರೂ ಕೂಡ ಅಳವಡಿಸಿಕೊಳ್ಳಬಾರದು ಎಂದರು.

ಮಾನವನ ಮನಶಾಂತಿಗೆ ಅಧ್ಯಾತ್ಮಿಕ ಕೇಂದ್ರಗಳು ಅತ್ಯವಶ್ಯಕ, ಅಧ್ಯಾತ್ಮಿಕತೆ ಮತ್ತು ಸೂಫಿಸಂ ಅದು ಜನರಲ್ಲಿ ಸ್ನೇಹ ಮತ್ತು ಪ್ರೀತಿಯನ್ನು ಹರಡುತ್ತದೆ. ಅದು ಸೂಫಿಗಳ ಸಾನಿಧ್ಯದಲ್ಲಿ ಮಾತ್ರ ಸಿಗಲು ಸಾಧ್ಯ. ಇಸ್ಲಾಮಿನ ಸುಂದರವಾದ ತತ್ವಗಳ ಬಗ್ಗೆ ಅರಿವಿನ ಕೊರತೆ ಇರುವವರು ವಿರೋಧ ಮಾಡುತ್ತಾರೆ. ಅಂತ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ಪವಾಡ ಪುರುಷರು ಅವರ ಕಾಲದಲ್ಲಿ ಮನುಷ್ಯರಿಗೆ ಮನುಷ್ಯತ್ವ ಮತ್ತು ಪ್ರೀತಿಯ ಪಾಠವನ್ನು ಹೇಳಿಕೊಟ್ಟಂತವರು. ಎಲ್ಲಾ ಜನಾಂಗದವರಲ್ಲೂ ಮನುಷ್ಯತ್ವ ಎಂಬುದು ಅಳವಡಿಸಿಕೊಳ್ಳಬೇಕು. ಅಲ್ಲದವನು ಯಾವುದೇ ಧರ್ಮದ ನೈಜ ಅನ್ವಯಿಯಾಗಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಉದ್ಭೋಧನಾ ಭಾಷಣ ಮಾಡಿದ ಧಾರ್ಮಿಕ ಪ್ರಭಾಷಕ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಅಪಾರ ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಎಲ್ಲಾ ಧರ್ಮದವರು ತಮ್ಮದೇ ಆದ ಆಚಾರ, ವಿಚಾರ, ಸಂಸ್ಕೃತಿ ಪರಂಪರೆಯೊAದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವುದರಿಂದಲೇ ಭಾವೈಕತೆಯ ಸೌಹಾರ್ದ ಸಮಾಜ ಇಲ್ಲಿ ನಿರ್ಮಾಣವಾಗಿದೆ.

ಸರ್ವಧರ್ಮದ ಸಮನ್ವಯ ಕೇಂದ್ರಗಳಿAದ ಶಾಂತಿ ಸಹ ಬಾಳ್ವೆಯಿಂದಲೇ ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ. ಇಂತಹ ಸಾರ್ವಜನಿಕ ಸಮ್ಮೇಳನಗಳ ಮೂಲಕ ಭಾವೈಕ್ಯತೆಯೊಂದಿಗೆ ಒಗ್ಗೂಡಿ ಆಚರಣೆಗಳು ಮಾಡಿದ್ದಲ್ಲಿ ಸಮಾಜದಲ್ಲಿ ಸಹೋದರತ್ವ ನಿರ್ಮಾಣವಾಗಲು ಸಾಧ್ಯವಾಗಲಿದೆ ಎಂದರು.

ಪ್ರತಿಯೊಬ್ಬರು ಅವರವರ ಧರ್ಮದ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅವರು ಧರ್ಮದ ಅನುಯಾಯಿಗಳಾಗಲು ಮತ್ತು ಪರಸ್ಪರ ಶಾಂತಿ ಸೌಹಾರ್ದತೆಯ ಬದುಕು ಸಾಗಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಸಯ್ಯಿದ್ ಮುಹೀನಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಿದರು.

ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಸಮಾಅತ್ ಅಧ್ಯಕ್ಷ ಪಿ.ಎ ಅಬೂಬಕ್ಕರ್ ಸಖಾಫಿ ಪುದಿಯೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರ್ ತಂಙಳ್, ಜಮಾಅತ್ ಮಾಜಿ ಅಧ್ಯಕ್ಷ ಹುಸೈನ್ ಸಖಾಫಿ, ಇಲ್ಯಾಸ್ ಅಲ್ ಹೈದ್ರೋಸಿ ತಂಙಳ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎ.ಇಸ್ಮಾಯಿಲ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎ.ಹಂಸ, ಚಕ್ಕೇರ ಇಸ್ಮಾಯಿಲ್, ಕುಂಜಿಲ ಜಮಾಅತ್ ಅಧ್ಯಕ್ಷ ಶೌಕತ್ ಅಲಿ, ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಹಳೇ ತಾಲೂಕು ಜಮಾಅತ್ ಅಧ್ಯಕ್ಷ ಟಿ. ಎ.ಮೊಹಮ್ಮದ್, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಕೆಪಿಸಿಸಿ ಸದಸ್ಯ ಯಾಕೂಬ್ ,ಎಂ.ಎ.ಮನ್ಸೂರ್ ಅಲಿ, ಹಂಸ ದೋರೂಟ್, ಜಮಾಅತ್ ಉಪಾಧ್ಯಕ್ಷ ಬಿ. ಯು. ಅಶ್ರಫ್, ಜಮಾಅತ್ ಪದಾಧಿಕಾರಿಗಳು, ಮತ್ತಿತರ ಪ್ರಮುಖರು, ಉಪಸ್ಥಿತರಿದ್ದರು.

ಎಮ್ಮೆಮಾಡು ಜಮಾಅತ್ ಉಪಾಧ್ಯಕ್ಷ ಮೊಹಮ್ಮದ್ ಅಶ್ರಫ್ ಸ್ವಾಗತಿಸಿ, ವಂದಿಸಿದರು. ಉರೂಸ್ ಅಂಗವಾಗಿ ಮಸೀದಿಯಲ್ಲಿ ಮೌಲೂದ್ ಪಾರಾಯಣ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ನಡೆದ ಅನ್ನದಾನ ಕಾರ್ಯಕ್ರಮದಲ್ಲಿ ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. - ಪ್ರಭಾಕರ್