ಮಡಿಕೇರಿ, ಏ. ೨೯: ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ಗಳ ಕುರಿತು ನೀಡಿರುವ ಅಸಂಬದ್ಧ ಸಂಭಾಷಣೆಯನ್ನು ಖಂಡಿಸಿರುವ ಮಡಿಕೇರಿಯ ಮೆಕ್ಯಾನಿಕ್ಗಳು ಪೊಲೀಸ್ ದೂರು ನೀಡಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಕ್ಯಾನಿಕ್ ಮಣಿ ಅವರು, ಜೀ ಕನ್ನಡ ವಾಹಿನಿಯ ಮಹಾನಟಿ ಎಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯೊಬ್ಬಳು ‘ಮೆಕ್ಯಾನಿಕ್ಗಳನ್ನು ಮದುವೆಯಾದರೆ ಗ್ರೀಸ್ ತಿನ್ನಬೇಕಾಗುತ್ತದೆ' ಎಂದು ಹೇಳಿರುವ ಸಂಭಾಷಣೆ ವೃತ್ತಿ ಬಾಂಧವರಿಗೆ ನೋವುಂಟು ಮಾಡಿದೆ. ಈ ಪದ ಬಳಕೆಯನ್ನು ತೀರ್ಪುಗಾರರು ವಿರೋಧಿಸುವ ಬದಲು ಚಪ್ಪಾಳೆ ತಟ್ಟುವುದರೊಂದಿಗೆ, ಪ್ರದರ್ಶನಕ್ಕೆ ‘ಗೋಲ್ಡನ್ ಬಜರ್’ ನೀಡಿರುವುದು ವಿಷಾದನೀಯ. ಟಿ.ಆರ್.ಪಿ.ಗಾಗಿ ಒಂದು ವೃತ್ತಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಖಂಡನೀಯ. ಈ ನಿಟ್ಟಿನಲ್ಲಿ ವಾಹಿನಿ ಹಾಗೂ ರಿಯಾಲಿಟಿ ಶೋ ಮುಖ್ಯಸ್ಥರು ಬಹಿರಂಗವಾಗಿ ಮೆಕ್ಯಾನಿಕ್ಗಳ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ ಅವರು, ಇಲ್ಲದಿದ್ದಲ್ಲಿ ರಾಜ್ಯ ವ್ಯಾಪಿ ಹೋರಾಟ, ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಹೇಳಿಕೆ ಖಂಡಿಸಿ ಮಡಿಕೇರಿ ನಗರ ಠಾಣೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ವಾಹಿನಿ ಮುಖ್ಯಸ್ಥರು, ರಿಯಾಲಿಟಿ ಶೋ ಆಯೋಜಕರು, ಸಂಭಾಷಣೆ ಹೇಳಿದ ಸ್ಪರ್ಧಿ, ಸಂಭಾಷಣೆಗಾರ, ತೀರ್ಪುಗಾರರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದರು. ‘ಸ್ಕಿಟ್'ನಲ್ಲಿ ಮೆಕ್ಯಾನಿಕ್ ಶಾಪ್ ಅನ್ನು ಕೊಚ್ಚೆ ಕೊಳಕ್ಕೆ ಹೋಲಿಸಿರುವುದನ್ನು ಆಕ್ಷೇಪಿಸಿದರು.
ಗೋಷ್ಠಿಯಲ್ಲಿ ಮೆಕ್ಯಾನಿಕ್ಗಳಾದ ಚಂದ್ರು, ಅನಂತ್, ಕಿರಣ್, ಕುಮಾರ್, ಗಣೇಶ್ ಹಾಜರಿದ್ದರು.