ಸಿದ್ದಾಪುರ, ಏ. ೩೦: ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಒಂದು ದಿನದ ಮಾಹಿತಿ ಕಾರ್ಯಾಗಾರ ನೆಲ್ಲಿಹುದಿಕೇರಿಯಲ್ಲಿ ನಡೆಯಿತು.
ನೈಮ ಎಜುಕೇಷನಲ್ ಮತ್ತು ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಸಂಘಟನೆಯ ಗೌರವ ಉಪಾಧ್ಯಕ್ಷ ಅಫ್ಸಲ್ ಅಧ್ಯಕ್ಷತೆಯಲ್ಲಿ ಕೆ.ಎಂ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಎಸ್.ಎನ್.ಡಿ.ಪಿ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಗಾಂಜಾ, ಡ್ರಗ್ಸ್ ಸೇರಿದಂತೆ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಸಾಧನೆ ಮಾಡಬೇಕೆಂಬ ಗುರಿಯೊಂದಿಗೆ ಸಾಗಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಪೋಷಕರ ಸಹಕಾರ ಕೂಡ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಅನೇಕ ಪ್ರತಿಭಾವಂತ ವಿದ್ಯಾರ್ಥಿ ಗಳಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಆಸಕ್ತಿಯೊಂದಿಗೆ ಉನ್ನತ ಹುದ್ದೆಯ ಗುರಿಹೊಂದಿರುತ್ತಾರೆ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ, ಮಾಹಿತಿ ಕೊರತೆಯಿಂದಾಗಿ ಎಲ್ಲದರಿಂದ ವಂಚಿತರಾಗುತ್ತಾರೆ. ಹೀಗಾಗಬಾರದು ಎಂದು ಆಲೋಚಿಸಿ ನೈಮಾ ಸಂಘಟನೆ ಈ ಕಾರ್ಯಾಗಾರ ಆಯೋಜಿಸಿದೆ ಎಂದು ಪಿಡಿಓ ಅಬ್ದುಲ್ಲಾ ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ನೆಲ್ಲಿಹುದಿಕೇರಿಯ ನೌಶಾದ್ ಮತ್ತು ತಿತಿಮತಿಯ ಶಾಕಿರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಸಂವಾದ ನಡೆಸಿದರು. ಕಾರ್ಯಾಗಾರದಲ್ಲಿ ೬೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ೭ ನೇ ಸ್ಥಾನ ಪಡೆದ ನೆಲ್ಲಿಹುದಿಕೇರಿಯ ನಿವಾಸಿ ಗೊಣಿಕೊಪ್ಪಲು ವಿದ್ಯಾನಿಕೇತನ ಶಾಲೆಯ ಚರೀಷ್ಮಾ ಹಾಗೂ ಕಲಾ ವಿಭಾಗದಲ್ಲಿ ಜಿಲ್ಲೆಯಲ್ಲಿ ೨ನೇ ಸ್ಥಾನ ಪಡೆದ ನೆಲ್ಲಿಹುದಿಕೇರಿಯ ಸಿದ್ದಾಪುರದ ಇಕ್ರಾ ಶಾಲೆಯ ಸಫ್ನಾ ಅವರುಗಳನ್ನು ಗಣ್ಯರು ಸನ್ಮಾನಿಸಿ ದರು. ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕಪಡೆದ ನೆಲ್ಲಿ ಹುದಿಕೇರಿ ಭಾಗದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನೆಲ್ಲಿಹುದಿಕೇರಿ ಕೆಪಿಎಸ್ ವಿದ್ಯಾಸಂಸ್ಥೆಯ ಉಪ ಪ್ರಾಂಶುಪಾಲ ಅನಿಲ್ ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮೆಹಬೂಬ್ ಮಾಸ್ಟರ್, ಶಿಕ್ಷಕರಾದ ಭರತ್, ಜಾಫರ್, ಇಸ್ಮಾಯಿಲ್, ಸಿದ್ದಾಪುರ ಗ್ರಾ.ಪಂ ಪಿಡಿಓ ಶಫೀಕ್, ಪ್ರಮುಖರಾದ ಎ.ಕೆ ಹಕಿಂ, ಡಾ. ಉದಯ ಕುಮಾರ್, ಜೋಸೆಫ್ ಶ್ಯಾಂ, ಕೆ.ಎಂ ಬಶೀರ್, ನಿಯಾಸ್ ಸುಂಟಿಕೊಪ್ಪ, ಸಾಬು ವರ್ಗೀಸ್, ಕೆ.ಯು ಅಬ್ದುಲ್ ಮಜೀದ್, ಎ.ಕೆ ಅಬ್ದುಲ್ಲಾ, ಸಫಿಯಾ ಮುಹಮ್ಮದ್, ಹನೀಫ, ಮುಸ್ತಫ, ನೌಶಾದ್, ಜಂಶೀರ್ ಸೇರಿದಂತೆ ಮತ್ತಿತರರು ಇದ್ದರು.