ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಏ. ೩೦: ಕೊಡಗು ಜಿಲ್ಲೆಯಲ್ಲಿ ಕಳೆದ ೩-೪ ತಿಂಗಳಿನಿAದ ವಾಂತಿ, ಭೇದಿ, ಜ್ವರದಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಜನವರಿಯಿಂದ ಇಲ್ಲಿಯ ತನಕ ೪೭೫ ವಾಂತಿ, ಭೇದಿ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ೩೨ ಡೆಂಗ್ಯು ಪ್ರಕರಣಗಳೂ ವರದಿಯಾಗಿದ್ದು, ಕಲುಷಿತ ನೀರು ಸೇವನೆ, ಅಶುಚಿತ್ವ ವಾತಾವರಣದಿಂದ ರೋಗಗಳು ಹರಡುತ್ತಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದ್ದು, ಮುಂಜಾಗ್ರತೆ ವಹಿಸಲು ಸೂಚನೆಯನ್ನೂ ನೀಡಿದೆ.

ಕೊರೊನಾವನ್ನು ಮರೆತು ಸಹಜ ಸ್ಥಿತಿಗೆ ಬರುತ್ತಿರುವ ಹೊತ್ತಿನ ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಕಾಲರಾ ರೋಗದ ಲಕ್ಷಣ ಹೊಂದಿರುವ ೪೭೫ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ ಬಹುತೇಕ ಕಲುಷಿತ ನೀರು ಸೇವನೆ ಕಾರಣ ಎಂಬ ವರದಿಯೂ ಬಂದಿದೆ. ಬೇಸಿಗೆ ಆಗಿರುವ ಕಾರಣ ನೀರಿನ ಟ್ಯಾಂಕ್, ತೊಟ್ಟಿಗಳನ್ನು ಸೊಳ್ಳೆಗಳು ಆಶ್ರಯ ತಾಣ ಮಾಡಿಕೊಂಡಿವೆ. ಅದೇ ರೀತಿ ನೀರಿನ ಸಂಗ್ರಹ ಮೂಲ ಶುಚಿಯಾಗಿ ಇರದಿರುವುದು ರೋಗದ ಉಲ್ಭಣಕ್ಕೆ ಒಂದು ಕಾರಣವಾಗಿದೆ. ಮನೆ ಹಾಗೂ ಸಾರ್ವಜನಿಕ ಪ್ರದೇಶ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳದಿರುವುದು ರೋಗ ಹರಡಲು ಮತ್ತೊಂದು ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

೪೭೫ ವಾಂತಿ, ಭೇದಿ ಪ್ರಕರಣಗಳ ಪೈಕಿ ಅಸ್ವಸ್ಥಗೊಂಡಿದ್ದ ಬಹುತೇಕರು ಗುಣಮುಖ ಹೊಂದಿದ್ದಾರೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ರೋಗಿಗಳು ಇದೀಗ ಚೇತರಿಕೆ ಕಂಡಿದ್ದಾರೆ. ಜನವರಿಯಿಂದ ಇಲ್ಲಿಯ ತನಕ ೩೨ ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು,

(ಮೊದಲ ಪುಟದಿಂದ) ಕಳೆದ ವರ್ಷ ೧೬೫ ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ ಡೆಂಗ್ಯು ಬಾಧಿಸಿದ ರೋಗಿಗಳು ಗುಣಮುಖರಾಗಿದ್ದಾರೆ. ಬೇಸಿಗೆ ಕಾಲವಾಗಿರುವುದರಿಂದ ಜಿಲ್ಲೆಯಲ್ಲಿರುವ ಎಲ್ಲಾ ಹಳ್ಳಿ. ಪಟ್ಟಣಗಳಲ್ಲಿ ಜಾತ್ರೆ, ರಥೋತ್ಸವ, ಮದುವೆ ಸಮಾರಂಭಗಳು, ದರ್ಗಾಗಳಲ್ಲಿ ಉರೂಸ್‌ಗಳು ಮತ್ತು ಊರು ಹಬ್ಬಗಳ ಆಚರಣೆಯಿರುತ್ತವೆೆ. ಇಂತಹ ಆಚರಣೆಯ ಸಂದರ್ಭದಲ್ಲಿ ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಕರುಳುಬೇನೆ. ಕಾಲರಾ, ವಿಷಮಶೀತ ಜ್ವರ, ಕಾಮಾಲೆ(ಜಾಂಡೀಸ್) ಇತ್ಯಾದಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಅಧಿಕವಾಗಿವೆ. ಈ ಸಾಂಕ್ರಾಮಿಕ ರೋಗಗಳು ಸಂಭವಿಸದAತೆ ಮತ್ತು ಉಲ್ಬಣಗೊಳ್ಳದಂತೆ ಅಗತ್ಯ ಕ್ರಮವಹಿಸಲು ಜಿಲ್ಲಾಡಳಿತ ಕೆಲವೊಂದು ಸೂಚನೆಯನ್ನು ನೀಡಿದೆ.