ಕಣಿವೆ, ಏ. ೨೯: ಬಿಸಿಲ ಬೇಗೆಗೆ ಭೂಮಿ ಕಾಯುತ್ತಿದೆ. ಭೂಮಿಯ ತಾಪಕ್ಕೆ ಅಂತರ್ಜಲ ಪಾತಾಳಕ್ಕಿಳಿದಿದೆ. ಕೊಳವೆ ಬಾವಿಗಳು ಒಂದೊAದಾಗಿ ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸುತ್ತಿವೆ. ಇದು ಅಗ್ನಿ ದುರಂತಗಳನ್ನು ಶಮನಗೊಳಿಸುವ ಅಗ್ನಿಶಾಮಕ ಸೇವೆಯನ್ನೂ ಕೂಡ ಕಾಡಿದೆ.
ಕುಶಾಲನಗರದ ಸುಂದರನಗರ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ವಾಹನಕ್ಕೆ ನೀರು ತುಂಬಿಸುವ ಕೊಳವೆ ಬಾವಿಯಲ್ಲಿ ಕಳೆದ ಒಂದು ವಾರದಿಂದ ನೀರು ಪೂರ್ಣ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಇದರಿAದಾಗಿ ಇಲ್ಲಿನ ಸಿಬ್ಬಂದಿಗಳು ಅಕ್ಕಪಕ್ಕದ ಕೃಷಿಕರ ಬಳಿ ಅಂಗಲಾಚಿ ಅವರಲ್ಲಿನ ಕೊಳವೆ ಬಾವಿಗಳಲ್ಲಿ ನೀರನ್ನು ಪಡೆದು ಅಗ್ನಿಶಾಮಕ ಇಲಾಖೆಯ ವಾಹನಕ್ಕೆ ತುಂಬಿಸುತ್ತಿದ್ದೇವೆ ಎಂದು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ಇಲಾಖೆಯ ಸಿಬ್ಬಂದಿಯೊಬ್ಬರು ಹೇಳಿದರು.
ಇಲ್ಲಿನ ಅಗ್ನಿಶಾಮಕ ಇಲಾಖೆಯಲ್ಲಿ ತುರ್ತು ಸೇವೆಗೆ ಸ್ಪಂದಿಸುವ ಕೇವಲ ಒಂದೇ ಒಂದು ವಾಹನ ಇದ್ದು, ಉಳಿದ ಎರಡು ವಾಹನಗಳು ಬಳಕೆಗೆ ಯೋಗ್ಯವಾಗಿಲ್ಲ ಎನ್ನಲಾಗಿದೆ.
ಇಲಾಖೆಯಲ್ಲಿ ಒಟ್ಟು ೨೮ ಹುದ್ದೆಗಳು ಮಂಜೂರಾಗಿದ್ದು ಇದೀಗ ಕೇವಲ ೧೮ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕುಶಾಲನಗರ ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಿನ ವಿಸ್ತೀರ್ಣದಲ್ಲಿದ್ದು ಕಾಡಿಗೆ ಬೆಂಕಿ ಬಿದ್ದಾಗಲೂ ಇದೇ ಇಲಾಖೆ ಸ್ಪಂದಿಸಬೇಕಿದೆ. ಇನ್ನು ಸಾರ್ವಜನಿಕರ ಇನ್ನಿತರ ಬೆಂಕಿ ಅವಘಡಗಳಿಗೂ ಸ್ಪಂದಿಸಬೇಕಿದೆ.
ಈ ಬಾರಿ ಕಳೆದ ಡಿಸೆಂಬರ್ನಿAದ ಇಲ್ಲಿಯತನಕ ಒಟ್ಟು ೩೭ ಅಗ್ನಿ ಅವಘಡಗಳನ್ನು ಇಲಾಖೆ ತಪ್ಪಿಸುವ ಕೆಲಸ ಮಾಡಿದೆ. ಮುಂದಿನ ಜೂನ್ ತಿಂಗಳ ತನಕ ಇದೇ ಮಾದರಿಯ ಬಿಸಿಲ ಆರ್ಭಟ ಮುಂದುವರೆದಲ್ಲಿ ಮತ್ತೆ ಘಟಿಸಬಹುದಾದ ಅಗ್ನಿ ಅನಾಹುತಗಳನ್ನು ತಡೆಯಲು, ಬೆಂಕಿ ಅವಘಡಗಳನ್ನು ಆರಿಸಲು ಸಾರ್ವಜನಿಕರು ಇಲಾಖೆಗೆ ಕರೆ ಮಾಡಿದ ಅರೆಕ್ಷಣದಲ್ಲಿ ತುರ್ತು ಸೇವೆಗೆ ಕಟಿಬದ್ಧರಾಗಲು ಇಲ್ಲಿ ನೀರಿನ ಲಭ್ಯತೆ ಬಹುಮುಖ್ಯವಾಗಿದೆ.
ಸಂಬAಧಿಸಿದ ಜನಪ್ರತಿನಿಧಿಗಳು, ಜಿಲ್ಲಾಡಳಿತ ಕೂಡಲೇ ಈ ಅಗ್ನಿಶಾಮಕ ಇಲಾಖೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಕಾರ್ಯೋನ್ಮುಖರಾಗಬೇಕಿದೆ.
-ಕೆ.ಎಸ್. ಮೂರ್ತಿ