ಸೋಮವಾರಪೇಟೆ, ಏ. ೨೯: ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟಶ್ರೇಣಿ ಗ್ರಾಮಗಳಲ್ಲಿ ಸಾಂಪ್ರದಾಯಿಕ ಆಚರಣೆಗಳ ಮೂಲಕ ಸುಗ್ಗಿ ಉತ್ಸವಗಳು ನಡೆಯುತ್ತಿದ್ದು, ಸಮೀಪದ ನಗರಳ್ಳಿ ಗ್ರಾಮದಲ್ಲಿ ಇಂದು ನಡೆದ ಕೂತಿನಾಡು ಸುಗ್ಗಿ ಉತ್ಸವ ಸಾಂಪ್ರದಾಯಿಕ ಸೊಡಗನ್ನು ಸಾಕ್ಷೀಕರಿಸಿತು.
ಗ್ರಾಮದ ಸುಭೀಕ್ಷೆಗೆ ಹರಸುವ ಮೂಲಕ ಬರ ಪರಿಸ್ಥಿತಿಯನ್ನು ದೂರಾಗಿಸಿ, ಉತ್ತಮ ಮಳೆ ಬೆಳೆಯ ಮೂಲಕ ನಾಡಿಗೆ ನೆಮ್ಮದಿ ತರುವಂತೆ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಗ್ರಾಮ ದೇವತೆ ಶ್ರೀ ಸಬ್ಬಮ್ಮ ತಾಯಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕೂತಿನಾಡಿಗೆ ಸೇರಿದ ೧೮ ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗ್ರಾಮದೇವತೆ ಸಬ್ಬಮ್ಮ ದೇವಿಗೆ ೧೫ ದಿನಗಳ ಕಾಲ ವಿಶೇಷ ಪೂಜೆಗಳನ್ನು ಸಲ್ಲಿಸಿ, ಗ್ರಾಮ ಸುಭೀಕ್ಷೆಗೆ ಬೇಡಿಕೆ ಹಾಗೂ ಮಳೆ, ಬೆಳೆ ಸಮೃದ್ಧಿಗಾಗಿ ಪ್ರಾರ್ಥನೆ ಮಾಡುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವವನ್ನು ಆಚರಿಸಲಾಯಿತು.
ತಲೆತಲಾಂತರಗಳಿAದ ಗ್ರಾಮೀಣ ಭಾಗದಲ್ಲಿ ಸುಗ್ಗಿ ಉತ್ಸವವನ್ನು ಅನೂಚಾನವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಗ್ರಾಮದ ನಿವಾಸಿಗಳು, ಮಹಿಳೆಯರು, ಮಕ್ಕಳು, ಹಿರಿಯರು ಉತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಗಳ ನೆರವೇರಿಕೆಗೆ ಗ್ರಾಮ ದೇವತೆಯಲ್ಲಿ ಪ್ರಾರ್ಥಿಸಿದರು. ಅದರಲ್ಲೂ ಕುಟುಂಬ ಸಮೇತ ತವರಿನ ಸುಗ್ಗಿಯಲ್ಲಿ ಭಾಗವಹಿಸುವ ಮೂಲಕ ಸಂಭ್ರಮದಿAದ ಸುಗ್ಗಿಯಲ್ಲಿ ಪಾಲ್ಗೊಂಡರು.
ಸುಗ್ಗಿ ಉತ್ಸವದ ಕೊನೆ ದಿನವಾದ ಸೋಮವಾರ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ ೪ ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸುಗ್ಗಿ ಉತ್ಸವಕ್ಕೆ ತೆರೆ ಬಿದ್ದಿತು.
ಸೋಮವಾರ ಬೆಳಿಗ್ಗೆ ಸುಗ್ಗಿಬನದ ಸಮೀಪವಿರುವ ಬಿಲ್ಲರಂಗದಲ್ಲಿ ಪೂರ್ವಜರ ಜೀವನ ಪದ್ದತಿಯನ್ನು ಬಿಂಬಿಸುವ ನೃತ್ಯ ಪ್ರಾಕಾರವನ್ನು ಗ್ರಾಮಸ್ಥರು ಅಭಿನಯಿಸಿದರು. ಅದರಲ್ಲೂ ಕಡವೆ ಬೇಟೆಯ ದೃಷ್ಟಾಂತಗಳು ಸಾಂಪ್ರದಾಯಿಕ ಆಚರಣೆಯ ಗತಕಾಲದ ನೆನಪುಗಳು ಮರುಕಳಿಸುವಂತೆ ಮಾಡಿತು.
ಸಾಂಪ್ರದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ಗ್ರಾಮದ ಹಿರಿಯರು, ಬಿಲ್ಲರಂಗದಲ್ಲಿ ಪ್ರದರ್ಶನ ಹಾಕುತ್ತ, ಮಲೆನಾಡು ಸುಗ್ಗಿ ಇತಿಹಾಸವನ್ನು ನೆರದಿದ್ದವರಿಗೆ ಮನವರಿಕೆ ಮಾಡಿದರು. ಸುಗ್ಗಿ ಕುಣಿತ, ಸುಗ್ಗಿಹಾಡುವದು, ಬಿಲ್ಲು ತೂಗುವದು ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನಡೆದವು. ೧೮ ಗ್ರಾಮಗಳ ನವ ದಂಪತಿಗಳು ಮದುವೆ ಕಾಣಿಕೆಯನ್ನು ಸಲ್ಲಿಸಿದರು. ಹರಕೆ ತಿರಿಸುವದು ಮತ್ತು ಹರಕೆ ಮಾಡಿಕೊಳ್ಳುವ ಕಾರ್ಯಗಳು ನಡೆದವು.
ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪೂಜೆ ನೆರವೇರಿಸಿದರು.
ಸುಗ್ಗಿ ಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ಭಕ್ತಾದಿಗಳಿಗೆ ಅನ್ನಸಂರ್ಪಣೆ ನಡೆಯಿತು. ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಬಿ. ಜಗದೀಶ್, ಉಪಾಧ್ಯಕ್ಷ ಸಿ.ಎಸ್. ಬೋಪಯ್ಯ, ಕಾರ್ಯದರ್ಶಿ ಜಗದೀಶ್ ಕೆ.ಯು., ಖಜಾಂಚಿ ಎನ್.ಬಿ. ಸುರೇಶ್, ಪದಾಧಿಕಾರಿ ಗಳಾದ (ಮೊದಲ ಪುಟದಿಂದ) ಪ್ರದೀಪ್ಕುಮಾರ್, ಸುರೇಶ್, ಕೆ.ಕೆ. ರಜಿತ್, ಕೆ.ಎಂ. ಅಶ್ವಥ್ ಅವರುಗಳು ಸುಗ್ಗಿ ಉಸ್ತುವಾರಿ ವಹಿಸಿದ್ದರು.
ದೇವರ ಒಡೆಕಾರರಾಗಿ ಸವಿನ್, ವಸಂತ್, ಇಂದ್ರೇಶ್, ನಿಶಾಂತ್, ಶಶಿಕುಮಾರ್ ಕಾರ್ಯನಿರ್ವ ಹಿಸಿದರು. ರಮೇಶ್, ಪ್ರಸನ್ನ ಹಾಗೂ ಪ್ರಕಾಶ್ ಅವರುಗಳು ಪೂಜಾ ಕಾರ್ಯದಲ್ಲಿ ಸಹಕರಿಸಿದರು. ಶಾಸಕ ಡಾ. ಮಂಥರ್ ಗೌಡ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಸೇರಿದಂತೆ ಇತರ ಪ್ರಮುಖರು ಸುಗ್ಗಿ ಉತ್ಸವದಲ್ಲಿ ಭಾಗಿಯಾಗಿದ್ದರು.