ಮಡಿಕೇರಿ, ಏ. ೨೯: ಯು.ಎ.ಇ.ಯ ದುಬೈಯಲ್ಲಿ ಜರುಗಿದ ಅಂಡರ್ -೨೦ ಜೂನಿಯರ್ ಏಷ್ಯನ್ ಚಾಂಪಿಯನ್ಶಿಪ್-೨೦೨೪ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ೧೦೦ ಮೀಟರ್ ಹರ್ಡಲ್ಸ್ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ೧೩.೬೬ ಸೆಕೆಂಡ್ನಲ್ಲಿ ಉನ್ನತಿ ಗುರಿ ಸಾಧಿಸಿ ಈ ಸಾಧನೆ ತೋರಿದ್ದು ಪದಕ ಪಡೆದುಕೊಂಡಿದ್ದಾರೆ.
ಇಲ್ಲಿ ಮತ್ತೊಂದು ವಿಶೇಷವೆಂದರೆ ಇಡೀ ಕುಟುಂಬದ ಕ್ರೀಡಾ ಸಾಧನೆ ಗಮನಾರ್ಹವಾಗಿದೆ. ಉನ್ನತಿ ಅವರ ತಂದೆ ರಾಷ್ಟಿçÃಯ ಅಥ್ಲೆಟಿಕ್ ಕೋಚ್ ಆಗಿರುವ ಬೊಳ್ಳಂಡ ಅಯ್ಯಪ್ಪ ಅವರು ೧೯೯೪ರ ಜೂನಿಯರ್ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ ೪x೪೦೦ ಮೀಟರ್ ರಿಲೇಯಲ್ಲಿ ಬೆಳ್ಳಿಪದಕ ಪಡೆದಿದ್ದಾರೆ. ತಾಯಿ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ೧೯೯೬ರಲ್ಲಿ ಹೆಫ್ಟಥ್ಲಾನ್ನಲ್ಲಿ ಭಾರತಕ್ಕೆ ಕಂಚಿನ ಪದಕ ಗಳಿಸಿದ ಸಾಧನೆ ಮಾಡಿದ್ದರು. ಇದೀಗ ಪುತ್ರಿ ಉನ್ನತಿ ಅಯ್ಯಪ್ಪ ಕೂಡ ಇದೇ ಜೂನಿಯರ್ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ೧೦೦ ಮೀಟರ್ ಹರ್ಡಲ್ಸ್ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಪೋಷಕರೊಂದಿಗೆ ಇದೀಗ ಪುತ್ರಿಯೂ ಭಾರತಕ್ಕೆ ಪದಕ ತಂದ ಕೀರ್ತಿ ಈ ಕುಟುಂಬದ್ದಾಗಿದೆ.
ದುಬೈಯಲ್ಲಿ ಸ್ಪರ್ಧೆ ನಡೆದ ಸಂದರ್ಭ ಅಲ್ಲಿನ ಕೊಡವ ಸಂಘದವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ತೇಜಿಸಿದರು.