ಚೆಯ್ಯಂಡಾಣೆೆ, ಏ. ೨೬ : ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಶುಕ್ರವಾರ ಮುಂಜಾನೆ ಕಾಫಿ ತೋಟ ಒಂದರ ಕೆರೆಗೆ ೩ ಕಾಡಾನೆಗಳು ಬಿದ್ದು ಹೊರಬರಲಾರದೆ ಒದ್ದಾಡುತ್ತಿದ್ದ ದೃಶ್ಯ ಕಂಡು ಬಂತು.

೨ ದೊಡ್ಡ ಆನೆಗಳು ಹಾಗೂ ಒಂದು ಮರಿಯಾನೆ ಕೆರೆಗೆ ಬಿದ್ದಿದವು. ಸ್ಥಳೀಯ ನಿವಾಸಿ ಹಾಗೂ ನಿವೃತ್ತ ಸೈನಿಕ ಮುಂಡಿಯೋಳAಡ ರಮೇಶ್ ಅಪ್ಪಯ್ಯ ಅವರ ಕೆರೆಗೆ ಶುಕ್ರವಾರ ಮುಂಜಾನೆ ಕಾಡಾನೆಗಳು ನೀರು ಕುಡಿಯಲು ತೆರಳಿದ ಸಂದರ್ಭ ಕೆರೆಗೆ ಬಿದ್ದಿವೆ.

ಕೆಲವು ಗಂಟೆಗಳ ಕಾಲ ಕೆರೆಯಲ್ಲೇ ಒದ್ದಾಡಿಕೊಂಡು ಮೇಲೆ ಬರಲು ಪ್ರಯತ್ನ ಪಡುತ್ತಿದ್ದವು. ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡ ಸ್ಥಳಕ್ಕಾಗಮಿಸಿದರು. ಅಷ್ಟರಲ್ಲಿ ಕೆರೆಯ ಒಂದು ಬದಿಯಿಂದ ಕಾಡಾನೆಗಳು ಹರಸಾಹಸಪಟ್ಟು ಮೇಲಕ್ಕೆ ಬಂದವು.

ಕಾಡಾನೆಗಳು ಕೆರೆಗೆ ಬಿದ್ದ ಸುದ್ದಿ ಗ್ರಾಮದಲ್ಲಿ ಹರಡುತ್ತದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ವೀಕ್ಷಿಸಿದರು.

ಕೂಡಲೇ ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು. ಜೀವ ಹಾನಿಯಾಗುವ ಮುನ್ನ ಅರಣ್ಯ ಇಲಾಖೆ ಎಚ್ಚತ್ತುಕೊಳ್ಳಬೇಕು, ನಷ್ಟ ಹೊಂದಿದ ತೋಟದ ಮಾಲೀಕನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ಸಂದರ್ಭ ವೀರಾಜಪೇಟೆ ಅರಣ್ಯ ಎಸಿಎಫ್ ನೆಹರು, ಅರಣ್ಯ ವಲಯಾಧಿಕಾರಿ ಕಳ್ಳಿರ ದೇವಯ್ಯ, ಇಟಿಎಫ್ ಗಾರ್ಡ್ ನಾಗರಾಜು, ಡಿಆರ್ ಎಫ್‌ಒ ಅನಿಲ್, ಆರ್‌ಆರ್‌ಟಿ ಸಿಬ್ಬಂದಿಗಳು, ಇಟಿಎಫ್ ಸಿಬ್ಬಂದಿಗಳು, ಕ್ಯಾಂಪ್ ಸಿಬ್ಬಂದಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

- ಅಶ್ರಫ್