ಮಡಿಕೇರಿ, ಏ. ೨೫: ಲೋಕಸಭಾ ಚುನಾವಣೆ ರಂಗು ಪಡೆದುಕೊಂಡು ಪಕ್ಷಗಳ ನಡುವಿನ ಹಣಾಹಣಿ ಜೋರಾಗಿದೆ. ಇದರೊಂದಿಗೆ ವರ್ಣರಂಜಿತ ಮತಗಟ್ಟೆ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಜಿಲ್ಲಾಡಳಿತ ಕೈ ಹಾಕಿದೆ.

ಜಿಲ್ಲೆಯ ೨ ವಿಧಾನಸಭಾ ಕ್ಷೇತ್ರಗಳು ಸೇರಿ ೫೪೬ ಮತಗಟ್ಟೆಗಳಿದ್ದು, ಈ ಪೈಕಿ ೧೦೮ ಮತಗಟ್ಟೆಗಳನ್ನು ವಲ್ನರೇಬಲ್, ಕ್ರಿಟಿಕಲ್ ಎಂದು ಗುರುತಿಸಲಾಗಿದೆ. ಇದರೊಂದಿಗೆ ೨೩ ಮತಗಟ್ಟೆಗಳನ್ನು ವಿಶೇಷ ಮತಗಟ್ಟೆಯಾಗಿ ಪರಿವರ್ತನೆ ಮಾಡಲಾಗಿದೆ. ಆಕರ್ಷಕವಾಗಿ ಇವುಗಳನ್ನು ಸಿಂಗಾರ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನವಾಗಿದೆ.

ಬಣ್ಣ ಬಣ್ಣದ ರಂಗೋಲಿ, ಬುಡಕಟ್ಟು ಮಂದಿಯ ಜೀವನ ಶೈಲಿಯ ಅನಾವರಣ, ಕಾಫಿಯ ಘಮಲು, ಬಲೂನ್‌ಗಳಿಂದ ಅಲಂಕಾರ, ಸೆಲ್ಫಿ ಬೂತ್, ಮಹಿಳೆಯರಿಂದ ನಿರ್ವಹಣೆಯಾಗುವ ‘ಪಿಂಕ್ ಬೂತ್’..ಹೀಗೆ ಅನೇಕ ಮತಗಟ್ಟೆಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿವೆೆ.

‘ಥೀಮ್ ಬೇಸ್ಡ್’ ಮತಗಟ್ಟೆಗಳಾಗಿ ಕುಶಾಲನಗರದ ರಂಗಸಮುದ್ರ, ಮಡಿಕೇರಿಯ ಹಿಲ್ ರಸ್ತೆ, ಪೊನ್ನಂಪೇಟೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಮಾಡಲಾಗಿದ್ದು, ಇಲ್ಲಿ ಕಾಫಿಯ ಹಿನ್ನೆಲೆ ಬಿಂಬಿಸುವ ಪೈಂಟಿAಗ್‌ಗಳನ್ನು ಮಾಡಿ ವರ್ಣರಂಜಿತಗೊಳಿಸಲಾಗಿದೆ. ಇಲ್ಲಿ ಮತದಾರರಿಗೆ ಕುಡಿಯಲು ಕಾಫಿ ವ್ಯವಸ್ಥೆಯನ್ನೂ ಮಾಡಿರುವುದು ಮತ್ತೊಂದು ವಿಶೇಷವಾಗಿದೆ.

ಗಿರಿಜನರ ಬದುಕು ಪರಿಚಯಿಸುವ ನಿಟ್ಟಿನಲ್ಲಿ ಮಾಲಂಬಿ, ಹೇರೂರು, ಪೊನ್ನಂಪೇಟೆಯ ಸಿ.ಬಿ. ಹಳ್ಳಿ, ಹೆಬ್ಬಾಲೆ, ನಾಗರಹೊಳೆ, ತಿತಿಮತಿ ಬೂತ್‌ಗಳನ್ನು ಸಾಂಪ್ರದಾಯಿಕ ಮತಗಟ್ಟೆಗಳಾಗಿ ಮಾಡಲಾಗಿದೆ. ಇಲ್ಲಿ ವರ್ಣ ಕಲಾಪ್ರಕಾರದ ಚಿತ್ರಗಳ ಮೂಲಕ ಬುಡಕಟ್ಟು ಸಮುದಾಯ ಜೀವನ ಚಿತ್ರಿಸಲಾಗಿದೆ. ಯುವ ಸಿಬ್ಬಂದಿ ತಂಡದಿAದ ನಿರ್ವಹಣೆಯಾಗುವ ಯುವ ಬೂತ್‌ಗಳನ್ನು ಆರ್ಜಿ ಕಲ್ಲುಬಾಣೆಯ ಬದ್ರಿಯಾ, ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ವಿಶೇಷ ಚೇತನರಿಂದ ನಿರ್ವಹಣೆಯಾಗುವ ಮತಗಟ್ಟೆಯಾಗಿ ಮಡಿಕೇರಿ ಸಂತ ಮೈಕಲರ ಶಾಲೆ, ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯನ್ನು ಮಾಡಲಾಗಿದೆ.

ಮಹಿಳೆಯರಿಂದ ನಿರ್ವಹಣೆಯಾಗುವ ಸಖಿ ಮತಗಟ್ಟೆ (ಪಿಂಕ್ ಬೂತ್) ಮಡಿಕೇರಿ ಎ.ವಿ. ಶಾಲೆ, ಶಿರಂಗಾಲ ಸರಕಾರಿ ಪಿ.ಯು. ಕಾಲೇಜು, ಮಡಿಕೇರಿ ಎಫ್‌ಎಂಸಿ ಕಾಲೇಜು, ಸೋಮವಾರಪೇಟೆ ಎಸ್.ಜಿ.ಎಂ. ಬಾಲಕಿಯರ ಪ್ರೌಢಶಾಲೆ, ಮುಳ್ಳುಸೋಗೆ ಹಿರಿಯ ಪ್ರಾಥಮಿಕ ಶಾಲೆ, ತಿತಿಮತಿ ಗ್ರಾ.ಪಂ. ಕಚೇರಿ, ವೀರಾಜಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ ಜೂನಿಯರ್ ಕಾಲೇಜು, ಗೋಣಿಕೊಪ್ಪ ಮಹಿಳಾ ಸಮಾಜ ಕಟ್ಟಡ, ವೀರಾಜಪೇಟೆ ಜಯಪ್ರಕಾಶ್ ಬಾಲಕಿಯರ ಪ್ರೌಢಶಾಲೆಯಲ್ಲಿ ತೆರೆಯಲಾಗಿದೆ. ಗುಲಾಬಿ (ಪಿಂಕ್) ಬಣ್ಣದ ಹಿನ್ನೆಲೆಯಲ್ಲಿ ಈ ಮತಗಟ್ಟೆಯನ್ನು ಸಿಂಗರಿಸಲಾಗಿದೆ.

ಟಿ ಹೆಚ್.ಜೆ. ರಾಕೇಶ್