ಗೋಣಿಕೊಪ್ಪಲು, ಏ.೨೫: ಯರವ ಕುಟುಂಬದ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಯರವ ಕ್ರೀಡೋತ್ಸವಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದ್ದು ಈಗಾಗಲೇ ಜಿಲ್ಲೆಯ ೬೫ ಯರವ ಕುಟುಂಬಗಳು ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಂಡಿವೆ. ಮೇ ೧ರಿಂದ ೫ರವರೆಗೆ ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು ಮೈದಾನವನ್ನು ಸಜ್ಜುಗೊಳಿಸುವ ಕಾರ್ಯ ಬರದಿಂದ ಸಾಗಿದೆ. ಕ್ರಿಕೆಟ್ ಪಂದ್ಯಾಟದೊAದಿಗೆ ಮಹಿಳೆಯರಿ ಗಾಗಿ ಹಗ್ಗಜಗ್ಗಾಟ ಪಂದ್ಯಾವಳಿ ಆಯೋಜನೆಗೊಂಡಿದೆ. ಜನಾಂಗದ ಆಚಾರ,ವಿಚಾರ ಪದ್ದತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಹಾಗೂ ಜನಾಂಗವನ್ನು ಒಂದೆಡೆ ಸೇರಿಸುವ ಪ್ರಯತ್ನವಾಗಿ ಕಳೆದ ೧೧ ವರ್ಷಗಳಿಂದ ಯರವ ಸಮುದಾಯವು ವಾರ್ಷಿಕವಾಗಿ ಒಂದೆಡೆ ಸೇರುವ ಪ್ರಯತ್ನ ನಡೆಸುತ್ತಿದೆ.

ಈ ಬಾರಿ ೧೨ನೇ ವರ್ಷದ ಕ್ರಿಕೆಟ್ ಪಂದ್ಯಾಟವು ತಿರುಮುಂಡೆಲಾತ್ತಿಲಾ ಮನೆತನದ ಹೆಸರಿನಲ್ಲಿ ನಡೆಯಲಿದೆ. ಈಗಾಗಲೇ ಪಂದ್ಯಾಟಕ್ಕೆ ಸಕಲ ಸಿದ್ದತೆಗಳು ಬರದಿಂದ ಸಾಗಿದೆ. ಜಿಲ್ಲೆಯ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯರವ ಸಮುದಾಯದ ತಂಡಗಳು ಭಾಗವಹಿಸಲಿವೆ.

ಯರವ ಸಮಾಜ ವತಿಯಿಂದ ನಡೆಯುವ ಕ್ರೀಡೋತ್ಸವದ ಉದ್ಘಾಟನೆಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರನ್ನು ಸಮಿತಿ ವತಿಯಿಂದ ಭೇಟಿ ಮಾಡುವ ಮೂಲಕ ಆಮಂತ್ರಣ ನೀಡಲಾಯಿತು. ಈ ವೇಳೆ ಮಾತನಾಡಿದ ಶಾಸಕ ಪೊನ್ನಣ್ಣ, ಯರವ ಸಮುದಾಯವು ಕಳೆದ ೧೧ ವರ್ಷಗಳಿಂದ ಸಮುದಾಯವನ್ನು ಒಂದೆಡೆ ಸೇರುವ ಪ್ರಯತ್ನವಾಗಿ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿದೆ. ಯರವ ಸಮುದಾಯವು ಸಮಾಜಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಕ್ರೀಡಾಕೂಟದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಯರವ ಸಮಾಜದ ಅಧ್ಯಕ್ಷ ಪಿ.ಕೆ.ಸಿದ್ದಪ್ಪ ಕಾರ್ಯದರ್ಶಿ ಪ್ರಸನ್ನ, ವೈ.ಕೆ. ಮಲ್ಲಪ್ಪ, ಪಿ.ಎಂ. ನಿತೀನ್, ಪಿ.ಎ. ದಿನೇಶ್, ಪಿ.ಎಂ. ಗಣೇಶ್ ಹಾಗೂ ಪಿ.ಎಸ್.ಶಶಿ ಸೇರಿದಂತೆ ಇನ್ನಿತರರು ಪದಾಧಿಕಾರಿಗಳು ಹಾಜರಿದ್ದರು.