ಮಡಿಕೇರಿ, ಏ. ೨೫: ಖಾಸಗಿ ಕಾರ್ಯಕ್ರಮ ನಿಮಿತ್ತ ಕೊಡಗು ಜಿಲ್ಲೆಗೆ ಆಗಮಿಸಿದ್ದ ಈ ಹಿಂದೆ ಭಾರತೀಯ ಭೂಸೇನೆಯ ಮುಖ್ಯಸ್ಥರಾಗಿ (ಚೀಫ್ ಆಫ್ ಆರ್ಮಿ ಸ್ಟಾಫ್) ಸೇವೆ ಸಲ್ಲಿಸಿದ್ದ ಪಿ.ವಿ.ಎಸ್.ಎಂ. ಪುರಸ್ಕೃತ ಜನರಲ್ ಮನೋಜ್ ಮುಕುಂದ್ ನರ್ವಾಣೆ (ನಿ) ಅವರು ನಗರದ ಜನರಲ್ ತಿಮ್ಮಯ್ಯ ಸಂಗ್ರಹಾಲಯಕ್ಕೆ ಭೇಟಿ ನೀಡಿದರು.

ಜನರಲ್ ತಿಮ್ಮಯ್ಯ ಅವರ ಸೇನಾ ಜೀವನದ ಕುರಿತಂತೆ ಸಮಗ್ರವಾಗಿ ಸ್ಮಾರಕ ಭವನದಲ್ಲಿ ಮಾಹಿತಿ ನೀಡಿರುವುದನ್ನು ಮುಕುಂದ್ ನರ್ವಾಣೆ ಶ್ಲಾಘಿಸಿದರು. ಜನರಲ್ ತಿಮ್ಮಯ್ಯ ಜೀವನ ಯುವ ಪೀಳಿಗೆಗೆ ಸದಾ ಆದರ್ಶಪ್ರಾಯ. ಇಂತಹ ಸ್ಮಾರಕ ಭವನ ವೀಕ್ಷಣೆಯಿಂದ ಜನರಿಗೆ ಭಾರತೀಯ ಸೇನೆಯ ಹೆಮ್ಮೆಯ ಧೀರ ಯೋಧರ ಸಾಹಸಗಾಥೆಗಳು ತಿಳಿದಂತಾಗುತ್ತದೆ ಎಂದರಲ್ಲದೇ ಸ್ಮಾರಕ ಭವನವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲ್ಪಡುತ್ತಿರುವುದನ್ನೂ ಶ್ಲಾಘಿಸಿದರು.

ಈ ಸಂದರ್ಭ ಅವರ ಪತ್ನಿಯೂ ಹಾಜರಿದ್ದರು. ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಈ ಸಂದರ್ಭ ಸ್ಮಾರಕ ಭವನದ ಮಾಹಿತಿ ನೀಡಿದರು.