ಮಡಿಕೇರಿ, ಏ. ೨೫: ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಮೇ ೪ ಹಾಗೂ ೫ ರಂದು ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಯಾರ್ಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿ ೧೧, ೧೩, ೧೫, ೧೭ ಹಾಗೂ ೧೯ ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ನಡೆಯಲಿದೆ. ೧೫ ಮತ್ತು ೧೯ ವರ್ಷದ ಬಾಲಕ-ಬಾಲಕಿಯರಿಗೆ ಮಿಶ್ರ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯ ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ತಂಡಗಳ ನೋಂದಾಣಿಗೆ ೭೪೮೩೭೧೬೨೭೪ ಸಂಖ್ಯೆಯನ್ನು ಸಂಪರ್ಕಿಸುವAತೆ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ನೆರವಂಡ ಜಿ. ಜೀವನ್, ಉಪಾಧ್ಯಕ್ಷೆ ಜ್ಯೋತಿ ಸೋಮಯ್ಯ, ಗೌರವ ಕಾರ್ಯದರ್ಶಿ ಅನಿಲ್ ಲೋಬೋ, ಸಹ ಕಾರ್ಯದರ್ಶಿ ಸುಮತಿ ವಿಶ್ವನಾಥ್, ಮಾಜಿ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಇದ್ದರು.