ಕುಶಾಲನಗರ, ಏ. ೨೫: ಕಾವೇರಿ ನದಿಯಲ್ಲಿ ನೀರಿನಲ್ಲಿ ವಿಷಕಾರಿ ಅಂಶ ಸೇರಿ ಸತ್ತು ಬಿದ್ದಿರುವ ನೂರಾರು ಜಲಚರಗಳ ಮೂಲಕ ನದಿ ಪಾತ್ರ ಸಂಪೂರ್ಣ ದುರ್ನಾಥ ಬೀರಿ ಕಲುಷಿತಗೊಂಡಿದೆ. ಪುರಸಭೆಯ ಮೂಲಕ ನದಿಗೆ ಬ್ಲೀಚಿಂಗ್ ಪೌಡರ್ ಹಾಕುವ ಮೂಲಕ ಸ್ವಚ್ಛಗೊಳಿಸುವ ಕಾರ್ಯಾಚರಣೆ ನಡೆಯಿತು.

ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ನದಿಯಲ್ಲಿ ಭಾರಿ ಗಾತ್ರದ ಮೀನುಗಳು ಹೇರಳವಾಗಿ ಸತ್ತು ನೀರಿನಲ್ಲಿ ತೇಲುತ್ತಿದ್ದು, ಇಡೀ ಪ್ರದೇಶ ಕಳೆದ ಎರಡು ದಿನಗಳಿಂದ ವಾಸನಾಮಯವಾಗಿ ಮಾರ್ಪಾಡಾಗಿತ್ತು. ಹದ್ದು, ಬಕ ಪಕ್ಷಿಗಳು, ಬೀದಿನಾಯಿಗಳು ಈ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ದೃಶ್ಯ ಗೋಚರಿಸಿದೆ.

ಮಾಹಿತಿ ತಿಳಿದ ಪುರಸಭೆಯ ಆರೋಗ್ಯ ಅಧಿಕಾರಿ ಉದಯ್ ಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕರು ನದಿಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸತ್ತು ತೇಲುತ್ತಿರುವ ಮೀನುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

- ಸಿಂಚು