ಮಡಿಕೇರಿ, ಏ. ೨೫: ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಕಾಲರಾ ಮತ್ತು ವಾಂತಿ, ಬೇಧಿ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲೆಯಲ್ಲಿಯೂ ನೀರಿನ ಅಭಾವ ಉಂಟಾಗಿದ್ದು, ಜಿಲ್ಲೆಯ ಎಲ್ಲಾ ರಸ್ತೆಬದಿ ವ್ಯಾಪಾರಿಗಳು, ಡಾಬಾ, ಸ್ವೀಟ್ ಸ್ಟಾಲ್, ಬೇಕರಿ, ಚಾಟ್ಸ್, ಮೆಸ್, ಕ್ಯಾಂಟೀನ್, ಕ್ಯಾಟರಿಂಗ್, ಸಮುದಾಯ ಭವನ, ಕಲ್ಯಾಣ ಮಂಟಪದವರು, ಪೇಯಿಂಗ್‌ಗೆಸ್ಟ್, ಹೋಮ್-ಸ್ಟೇ, ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್, ರೆಸಾರ್ಟ್, ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ, ಸರ್ಕಾರಿ ಮತ್ತು ಸರ್ಕಾರೇತರ ವಸತಿನಿಲಯ ಮತ್ತು ಎಲ್ಲಾ ಆಹಾರ ತಯಾರಿಕಾದಾರರು ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಕಡ್ಡಾಯವಾಗಿ ಗ್ರಾಹಕರಿಗೆ ಕುದಿಸಿದ ಶುದ್ಧವಾದ ನೀರನ್ನು ನೀಡುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ. ಅನಿಲ್ ಧಿವಾನ್ ತಿಳಿಸಿದ್ದಾರೆ.

ಆಹಾರ ತಯಾರಿಕಾ ಮತ್ತು ಸಂಗ್ರಹಣಾ ಸ್ಥಳಗಳಲ್ಲಿ ನೊಣಗಳು, ಸೊಳ್ಳೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವAತೆ, ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಮತ್ತು ತಯಾರಿಸಿರುವ ಎಲ್ಲಾ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಿಟ್ಟು ಸ್ವಚ್ಛವಾದ ವಿಧಾನದ ಮೂಲಕ ತಯಾರಿಕೆ ಮತ್ತು ವಿತರಣೆಯನ್ನು ಮಾಡುವಂತೆ ತಿಳಿಸಿದೆ.

ಎಲ್ಲಾ ಆಹಾರ ಉದ್ದಿಮೆದಾರರು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡAತೆ ಆಹಾರ ಪದಾರ್ಥ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಆಹಾರ ನೋಂದಣಿ/ ಪರವಾನಗಿಯನ್ನು ಪಡೆಯದೇ ವ್ಯಾಪಾರ ವಹಿವಾಟು ನಡೆಸುವವರು ತಕ್ಷಣದಲ್ಲೇ ಇಲಾಖೆಯಿಂದ ಆಹಾರ ನೋಂದಣಿ, ಪರವಾನಗಿಯನ್ನು ಪಡೆದುಕೊಳ್ಳುವುದು, ತಪ್ಪಿದಲ್ಲಿ ಕಾಯ್ದೆಯಡಿ ನೋಟೀಸ್ ಮತ್ತು ದಂಡವನ್ನು ವಿಧಿಸಲಾಗುವುದು ಎಂದು ಆಹಾರ ಸುರಕ್ಷತೆ ಡಾ. ಅನಿಲ್ ಧಾವನ್ ಇ. ಅವರು ಮಾಹಿತಿ ನೀಡಿದ್ದಾರೆ.