ಜ್ಯೋತಿಯ ಬೆಳಕು ಸದಾ ಅಂಧಕಾರವನ್ನು ಮೆಟ್ಟಿ ಬೆಳಕಿನ ಹಾದಿಯನ್ನು ತೋರಿಸುತ್ತದೆ, ಈ ಸಾಲಿನಲ್ಲಿ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಮಠ ಭಕ್ತರ ಪಾಲಿನ ಕೈಲಾಸದಂತಿದೆ. "ಪರಮ ಪೂಜ್ಯ ಶ್ರೀ ಮಹಾಂತ ಸ್ವಾಮೀಜಿ" ಯವರ ನೇತೃತ್ವದಲ್ಲಿ, ವೀರಶೈವ ಪರಂಪರೆಯ ಶಕ್ತಿಯಾಗಿ ಸಂಸ್ಕಾರ, ಸಂಸ್ಕೃತಿ ಪರಂಪರೆಯ ಪ್ರತೀಕವಾಗಿ ಭಕ್ತರಿಗೆ ದಾರಿ ದೀಪವಾದ ಪುಣ್ಯಕ್ಷೇತ್ರವಾಗಿದೆ!

೨೪ ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಅತಿ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದ್ದು ಹಲವು ಜನಪರ ಕಾರ್ಯ, ಸಮಾಜಮುಖಿ ಕೆಲಸಗಳಿಂದ ಭಕ್ತರ ಪ್ರೀತಿ ಪಾತ್ರವಾಗಿದೆ.

ಕ್ಷೇತ್ರದ ಪೂರ್ವಜರು, ಅಲ್ಲಿನ ಸ್ಥಳೀಯ ಜನಗಳು ಹೇಳುವ ಪ್ರಕಾರ ಹಿಂದೆ ಶ್ರೀ ಕ್ಷೇತ್ರ ಯತಿಗಳ ತಪೋನುಷ್ಠಾನಕ್ಕೆ ಅವಕಾಶ ಕಲ್ಪಿಸಿಕೊಟ್ಟ ಪುಣ್ಯ ಭೂಮಿಯಾಗಿತ್ತು,

ಶ್ರೀ ವೀರೇಶಯತಿಗಳ ತಪೋಶಕ್ತಿಯ ಫಲವಾಗಿ ಮನೆಹಳ್ಳಿಯ ಈ ಕ್ಷೇತ್ರಕ್ಕೆ "ತಪೋವನ" ಎಂಬ ಹೆಸರು ಬಂದಿತು. ಹಿಂದೆ ಶ್ರೀ ವೀರೇಶ ಎಂಬ ಯತಿಗಳು ತಮ್ಮ ಸಂಚಾರದ ಅವಧಿಯಲ್ಲಿ ಕೇರಳ ಸಂಚಾರದ ನಂತರ ಕರ್ನಾಟಕದ ಸುಂದರ ಜಿಲ್ಲೆ ಪ್ರಕೃತಿಯ ರಮಣೀಯ ಸ್ಥಳವಾದ ಕೊಡಗಿಗೆ ಭೇಟಿ ಕೊಡುತ್ತಾರೆ. ಇಲ್ಲಿಯ ಜೀವನದಿ ಕಾವೇರಿ ಉಗಮ ಸ್ಥಾನವನ್ನು ದರ್ಶಿಸಿ ಅಲ್ಲಿಂದ ಸೋಮವಾರಪೇಟೆ ಸಮೀಪ ಇರುವ ಪುಷ್ಪಗಿರಿ ತಪ್ಪಲಿನಲ್ಲಿ ಧ್ಯಾನಸ್ಥರಾಗಿರುವಾಗ ಶ್ರೀ ವೀರಭದ್ರರ ಪ್ರೇರಣೆಯಾಗುತ್ತದೆ. ಈ ಪ್ರೇರಣೆಯನ್ನು ಸಂಕಲ್ಪವಾಗಿಸಿಕೊAಡು ಸೂಕ್ತ ಸ್ಥಾನವನ್ನು ಅರಸುತ್ತಾ ಶನಿವಾರಸಂತೆ ಸಮೀಪದ ಮನೆಹಳ್ಳಿ ಎಂಬ ಕಾಡಿನ ಪ್ರಶಾಂತತೆಗೆ ಮನಸೋತು ಇಲ್ಲಿಯ ಪ್ರಕೃತಿ ಮಡಿಲಲ್ಲಿ ಕುಳಿತು ಶ್ರೀ ವೀರಭದ್ರರನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ. ಇವರ ತಪಸ್ಸಿಗೆ ಮೆಚ್ಚಿದ ವೀರಭದ್ರ ದೇವರು ವೀರೇಶ ಯತಿಗಳೊಡನೆ ಇಲ್ಲಿಯೇ ನೆಲೆಸುತ್ತಾರೆ. ಹಾಗಾಗಿ ಹರ ಗುರುವೆಂಬ ಬೇಧವಿಲ್ಲದೆ ಇಲ್ಲಿನ ಆಲಯದಲ್ಲಿ ಮೂಲಮೂರ್ತಿಯಾಗಿ ಶ್ರೀ ವೀರಭದ್ರ ಹಾಗೂ ಉತ್ಸವ ಮೂರ್ತಿಯಾಗಿ ಶ್ರೀ ಸಿದ್ಧಯತಿಗಳು ಒಂದೇ ಗರ್ಭಗುಡಿಯಲ್ಲಿ ನೆಲೆನಿಂತು "ಹರ ಗುರು'ವಿನ ಏಕೈಕ ಸನ್ನಿಧಾನವೆಂಬ ಕೀರ್ತಿಯೊಂದಿಗೆ ಭಕ್ತರ ಕಷ್ಟಕ್ಕೆ ಸ್ಪಂದಿಸುತ್ತಾ ಜನಪ್ರಿಯತೆ ಪಡೆದುಕೊಂಡಿದೆ.

ಈ ಎಲ್ಲಾ ಮಾಹಿತಿಗಳಿಗೆ ಸಾಕ್ಷಿ ಎಂಬAತೆ ಅನೇಕ ಕುರುಹುಗಳನ್ನು ಶ್ರೀ ಕ್ಷೇತ್ರದಲ್ಲಿ ನಾವು ಕಾಣಬಹುದಾಗಿದೆ. ಇಷ್ಟೆಲ್ಲಾ ಹಿನ್ನೆಲೆ ಇದ್ದರೂ ಸುಮಾರು ೨೦೦೪ ರವರೆಗೂ ಈ ಕ್ಷೇತ್ರವು ಅಜ್ಞಾತ ಸ್ಥಳವಾಗಿತ್ತು, ದಟ್ಟ ಕಾಡು, ಕಗ್ಗಲ್ಲುಗಳಿಂದ ಆವೃತವಾಗಿದ್ದ ಈ ಅಜ್ಞಾತ ಸ್ಥಳವನ್ನು ೨೦೦೪ರಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯವರ ಅಣತಿಯಂತೆ ಪೂಜ್ಯ ಶ್ರೀ ಮಹಾಂತ ಸ್ವಾಮೀಜಿಯವರು. ಇಲ್ಲಿಗೆ ಬಂದು ನೆಲೆಸಿ ಅತೀ ದೊಡ್ಡ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಶ್ರೀ ಕ್ಷೇತ್ರವನ್ನು ಅಭಿವೃದ್ಧಿಯ ಪಥದತ್ತ ನಡೆಸುತ್ತಿದ್ದಾರೆ. ಸೂರಿಲ್ಲದ ಗುಡಿಸಲನ್ನು ಮಠವನ್ನಾಗಿ ಪರಿವರ್ತಿಸಿ, ತಮ್ಮ ಭಗೀರಥ ಪ್ರಯತ್ನದಿಂದ ಶ್ರೀ ಕ್ಷೇತ್ರವನ್ನು ಇಂದು ಪುಣ್ಯ ಭೂಮಿಯನ್ನಾಗಿ ಮಾಡಿ ಭಕ್ತರ ಪಾಲಿಗೆ ಆಶ್ರಯದಾತರಾಗಿದ್ದಾರೆ.

ಈ ಮಠದ ಮತ್ತೊಂದು ಶ್ಲಾಘನೀಯ ವಿಚಾರವೆಂದರೆ "ಗೋಶಾಲೆ" ಸ್ಥಾಪನೆ. ಹಿಂದೂಸ್ಥಾನದ ಸಂಸ್ಕೃತಿಯ ದ್ಯೋತಕವಾಗಿರುವ, ಕ್ಷೀರಾಮೃತವನ್ನು ನೀಡಿ ಜನರ ಜೀವನಕ್ಕೆ ಆಸರೆಯಾಗಿರುವ ಪೂಜನೀಯ ಗೋವುಗಳನ್ನು ರಕ್ಷಿಸುತ್ತಿರುವುದು. ಇಲ್ಲಿನ ಗೋ ಶಾಲೆಯಲ್ಲಿ ಸುಮಾರು ನೂರಕ್ಕೂ ಅಧಿಕ ಗೋವುಗಳಿವೆ. ಇದರಲ್ಲಿ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಇರುವ ಸುಮಾರು ಮೂವತ್ತೆಂಟಕ್ಕೂ ಹೆಚ್ಚಿನ ವಿವಿಧ ತಳಿಗಳ ಗೋವುಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ.

ಭಕ್ತರೂ ಸಹ ಹಲವು ತಳಿಯ ಗೋವುಗಳನ್ನು ಮಠಕ್ಕೆ ನೀಡುತ್ತಿದ್ದು, ಗೋವುಗಳನ್ನು ಮಠಕ್ಕೆ ಕೊಡುವ ಆಸಕ್ತಿ ಇರುವ ಯಾರೇ ಆದರೂ ಕೊಡಬಹುದು. "ಸಾವಯವ ಕೃಷಿ" ಶ್ರೀ ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ. "ಸಾವಯವ ಕೃಷಿ" ರಾಸಾಯನಿಕ ಮುಕ್ತ ಬೆಳೆಗಳನ್ನು ಬೆಳೆದು ಭೂಮಾತೆಯನ್ನು ರಾಸಾಯನಿಕ ಗೊಬ್ಬರಗಳಿಂದ ಮುಕ್ತವಾಗಿಸಿ ರಕ್ಷಿಸುವ ನಿಟ್ಟಿನಲ್ಲಿ ಸ್ವಾಮೀಜೀಯವರು ರೈತರಿಗೆ ಪ್ರೇರಣೆ ನೀಡುತ್ತಾ ತಾವು ಸಾವಯವ ಕೃಷಿ ಮಾಡುತ್ತ ರೈತರಿಗೆ ಸಹಕಾರ ಕೊಡುತ್ತಿದ್ದಾರೆ.

"ದಾಸೋಹ"

ಪ್ರತಿದಿನವೂ ಎಷ್ಟೇ ಭಕ್ತರು ಬರಲಿ ಅನ್ನ ದಾಸೋಹ ಮಾಡುವ ಶ್ರೀ ಕ್ಷೇತ್ರ ಹಸಿದ ಹೊಟ್ಟೆಯಲ್ಲಿ ಯಾರನ್ನೂ ಕಳಿಸುವುದಿಲ್ಲ. ಇಲ್ಲಿನ ವಿಶೇಷತೆಯೆಂದರೆ ಕಾರ್ತಿಕ ಮಾಸದ ವಿಶೇಷ ಪೂಜೆ, ಸಾವಿರಾರು ಸಂಖ್ಯೆಯಲ್ಲಿ ಸೇರುವ ಭಕ್ತರಿಂದ ಲಕ್ಷಾಂತರ ಪ್ರಣತೆಗಳ ಜ್ಯೋತಿ ಪ್ರಕಾಶ ಮಾನವಾಗಿ ಬೆಳಗಿ ಭಕ್ತರ ಅಜ್ಞಾನವೆಂಬ ತಮವ ಕಳೆದು ಕ್ಷೇತ್ರದ ಅಂದವನ್ನು ಹೆಚ್ಚಿಸುವ ಮನಸ್ಸಿಗೆ ನೆಮ್ಮದಿ ನೀಡುವ ಆ ದೀಪಾಲಂಕಾರ ವನ್ನು ನೋಡುವುದೇ ಒಂದು ಆನಂದ. ಜೊತೆಗೆ ಕ್ಷೇತ್ರದಲ್ಲಿ ಬೆಳಿಗ್ಗೆ ಮತ್ತು ಸಂಜೆ ದೀಪಾರಾಧನೆಯಾಗುತ್ತದೆ.

ಹಾಗೇ ಪ್ರತಿ ತಿಂಗಳಲ್ಲಿ ಬರುವ ಪೌರ್ಣಮಿಯ ನಂತರದ ಎರಡನೆ ದಿನ ಅಂದರೆ ಪ್ರತಿ ಮಾಸ ಬಹುಳ ತದಿಗೆ ದಿನ ಸಂಜೆ ವಿಶೇಷ ಮಹಾಮಂಗಳಾರತಿ ಪೂಜೆ ನೆರವೇರುತ್ತದೆ. ಅಲ್ಲದೆ ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಲ್ಲಿ ದೇವರ ಉತ್ಸವಗಳೊಂದಿಗೆ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಈ ಜಾತ್ರೆಗೆ ರಾಜ್ಯದ ಎಲ್ಲಾ ಜಿಲ್ಲೆಯ ಸಾವಿರಾರು ಸಂಖ್ಯೆಯ ಭಕ್ತರ ಜನಸಾಗರವೇ ಹರಿದು ಬರುತ್ತದೆ. ಶ್ರೀ ಕ್ಷೇತ್ರದಲ್ಲಿ ನಿತ್ಯವೂ ಆರಾಧನೆಗೊಳ್ಳುತ್ತಿರುವ ಶ್ರೀ ವೃಷಭ ಲಿಂಗೇಶ್ವರಸ್ವಾಮಿ, ಶ್ರೀ ವೀರಭದ್ರಸ್ವಾಮಿ, ಗುರುಗಳಾದ ಶ್ರೀ ಗುರು ಸಿದ್ಧವೀರೇಶ್ವರರು, ಕ್ಷೇತ್ರದ ಮಾತೆ ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರು, ಸಕಲ ವಿಘ್ನನಿವಾರಕ ಪ್ರಥಮ ಪೂಜಿತ ಪ್ರಥಮೇಶ್ವರ ಮತ್ತು ಶ್ರೀ ಕ್ಷೇತ್ರ ರಕ್ಷಕ ದೈವ ಶ್ರೀ ಚಲುವರಾಯಸ್ವಾಮಿ ಯವರ ಕೃಪೆಯಿಂದ ಶ್ರೀ ಕ್ಷೇತ್ರ ಇಂದು ಸಕಲ ದೇವರುಗಳು ನೆಲೆಸಿರುವ ಪುಣ್ಯ ಭೂಮಿಯಾಗಿ ಬೆಳೆದಿದೆ.

- ಗೀತಾಂಜಲಿ ಎನ್.ಎಂ., ಸೋಮವಾರಪೇಟೆ.