ಮಡಿಕೇರಿ, ಏ. ೨೪: ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊAಡಿದೆ. ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ತಾ.೨೬ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಪ್ರತಿಷ್ಠೆಯ ಕ್ಷೇತ್ರವಾಗಿರುವ ಮೈಸೂರು-ಕೊಡಗು ಕ್ಷೇತ್ರದಲ್ಲಿ ಅಂತಿಮ ಕಣದಲ್ಲಿ ೧೮ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರರು ಇವರುಗಳ ಭವಿಷ್ಯ ಬರೆಯಲಿದ್ದಾರೆ.

ಲೋಕಸಭಾ ಚುನಾವಣೆ ತಾ.೨೬ರಂದು ನಡೆಯಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಮೈಸೂರು-ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷö್ಮಣ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧೆಯಲ್ಲಿದ್ದಾರೆ. ಇನ್ನುಳಿದಂತೆ ಸೊಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಸುನಿಲ್ ಟಿ.ಆರ್., ಕರ್ನಾಟಕ ರಾಷ್ಟç ಸಮಿತಿಯ ಎಂ.ಎಸ್. ಪ್ರವೀಣ್, ಅಖಿಲ ಭಾರತ ಹಿಂದೂ ಮಹಾ ಸಭಾದ ಎ.ಎಸ್. ಸತೀಶ್, ಕರುನಾಡು ಪಾರ್ಟಿಯ ಹೆಚ್.ಕೆ. ಕೃಷ್ಣ, ಉತ್ತಮ ಪ್ರಜಾಕೀಯ ಪಕ್ಷದ ಲೀಲಾವತಿ ಜೆ.ಎಸ್., ಸೋಷಿಯಾಲಿಸ್ಟ್ ಪಾರ್ಟಿಯ ಎನ್. ಹರೀಶ್, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಕ್ರಿಸ್ಟೋಫರ್ ರಾಜಕುಮಾರ್, ಸಮಾಜವಾದಿ ಜನತಾ ಪಾರ್ಟಿಯ ಹೆಚ್.ಎಂ. ನಂಜುAಡಸ್ವಾಮಿ, ಕರ್ನಾಟಕ ಜನತಾ ಪಕ್ಷದ ಎನ್.ಅಂಬರೀಶ್, ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್‌ನ ಎ.ಜಿ. ರಾಮಚಂದ್ರ ರಾವ್, ಪಕ್ಷೇತರ ಅಭ್ಯರ್ಥಿಗಳಾಗಿ ಪಿ.ಎಸ್. ಯಡಿಯೂರಪ್ಪ, ರಂಗಸ್ವಾಮಿ ಎಂ., ರಾಮಮೂರ್ತಿ ಎಂ., ಪಿ.ಕೆ. ದರ್ಶನ್ ಶೌರಿ, ರಾಜು, ಅಂಬೇಡ್ಕರ್ ಸಿ.ಜೆ. ಅವರುಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಮತದಾನ ಜಾಗೃತಿ : ಈ ಬಾರಿ ಚುನಾವಣೆ ಯಶಸ್ವಿಯಾಗಲು, ಎಲ್ಲರೂ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಸ್ವೀಪ್ ಸಮಿತಿ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಅವರುಗಳ ಮಾರ್ಗದರ್ಶನದಲ್ಲಿ ರಂಗೋಲಿ, ರ‍್ಯಾಲಿ, ಬೀದಿ ನಾಟಕ, ಈಜು, ಕ್ರಿಕೆಟ್ ಪಂದ್ಯಾವಳಿ ಮುಂತಾದ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿ ಎಲ್ಲರೂ ಮತದಾನದಲ್ಲಿ ಪಾಳ್ಗೊಳ್ಳುವಂತೆ ಪ್ರೇರೇಪಿಸಲಾಯಿತು. ಚುನಾವಣಾ ಪ್ರಕ್ರಿಯೆಯನ್ನು ಯಶಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

-ಸಂತೋಷ್