ಗೋಣಿಕೊಪ್ಪಲು, ಏ. ೨೪: ತೀವ್ರವಾದ ಬಿಸಿಲಿನ ಬೇಗೆಯನ್ನು ತಾಳಲಾರದೆ ಕೆರೆಗಿಳಿದ ಕಾಡಾನೆಗಳ ಹಿಂಡು ನಂತರ ಕೆರೆಯಿಂದ ಮೇಲೆ ಬರಲಾಗದೆ ಪರದಾಡಿದ್ದ ಘಟನೆ ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯ ಕುಮಟೂರು ಗ್ರಾಮದಲ್ಲಿ ನಡೆದಿದೆ. ಕೆರೆಯಲ್ಲಿ ಕಾಡಾನೆಗಳು ರಂಪಾಟ ಮಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಿತಿಮತಿ ಅರಣ್ಯ ವಲಯದ ಎಸಿಎಫ್ ಗೋಪಾಲ್, ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಶಂಕರ್ ಹಾಗೂ ಡಿಆರ್‌ಎಫ್‌ಒ ದಿವಾಕರ್ ಹಾಗೂ ಮಂಜುನಾಥ್ ಸ್ಥಳಕ್ಕೆ ತೆರಳಿ ಅಪಾಯದಲ್ಲಿದ್ದ ನಾಲ್ಕು ಕಾಡಾನೆಗಳನ್ನು ಕೆರೆಯಿಂದ ಹೊರತರುವಲ್ಲಿ ಯಶಸ್ವಿಯಾದರು.

ಬ್ರಹ್ಮಗಿರಿ ತಪ್ಪಲಿನ ಅರಣ್ಯ ಪ್ರದೇಶದಿಂದ ಆಗಮಿಸಿದ ಮರಿ ಸಹಿತ ೧೨ ಕಾಡಾನೆಗಳ ಹಿಂಡು ಶ್ರೀಮಂಗಲ ಬಳಿಯ ಕುಮಟೂರು ಭಾಗದ ಬಾಚಂಗಡ ದೀಪಕ್ ಎಂಬವರ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿವೆ. ನಡುರಾತ್ರಿ ವೇಳೆ ತೋಟದ ಸಮೀಪವಿದ್ದ ಕೆರೆಗೆ ಇಳಿದಿವೆ. ಬೆಳಕು ಹರಿಯುವ ತನಕ ಕೆರೆಯ ನೀರಿನಲ್ಲಿ ಕಾಲ ಕಳೆದಿವೆ. ಮುಂಜಾನೆಯ ಬೆಳಕು ಹರಿಯುತ್ತಿದ್ದಂತೆಯೆ ಕಾಡಿನತ್ತ ಹೆಜ್ಜೆ ಹಾಕಲು ಪ್ರಯತ್ನ ನಡೆಸಿದ ಕಾಡಾನೆಗಳಿಗೆ ಕೆರೆಯಿಂದ ಮೇಲೆ ಬರಲು ಸಾಧ್ಯವಾಗಿಲ್ಲ.

ಈ ವೇಳೆ ಭಾರೀ ಗಾತ್ರದ ಆನೆಗಳು ಇನ್ನುಳಿದ ಆನೆಗಳ ಸಹಾಯದೊಂದಿಗೆ ಕೆರೆಯ ಮೇಲ್ಭಾಗಕ್ಕೆ ಬಂದು ತೋಟ ಸೇರಿವೆ. ಆದರೆ ಒಂದು ಮರಿಯಾನೆಯೊಂದಿಗೆ ೪ ಆನೆಗಳು ಕೆರೆಯಿಂದ ಮೇಲೆ ಬರಲು ಸಾಧ್ಯವಾಗದೆ ಕೆರೆಯಲ್ಲಿ ಉಳಿದುಕೊಂಡು ಕಿರುಚಾಡುತ್ತಿದ್ದವು. ಆನೆಗಳ ಕಿರುಚಾಟದ ಸದ್ದಿಗೆ ಕಾಫಿ ತೋಟದ ಸುತ್ತಮುತ್ತಲಿನ ಗ್ರಾಮಸ್ಥರು ದೂರದಿಂದ ಆನೆಗಳ ಗೋಳಾಟ ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲಿಸಿ ನಂತರ ಮಧ್ಯಾಹ್ನದ ವೇಳೆ ಜೆಸಿಬಿ ಸಹಾಯದಿಂದ ಕೆರೆಯ ಒಂದು ಬದಿಯಲ್ಲಿ ಇಳಿಜಾರು ಮಾಡುವ ಮೂಲಕ ಕಾಡಾನೆಗಳು ಕೆರೆಯಿಂದ ಮೇಲಕ್ಕೆ ಬರಲು ಅನುಕೂಲ ಕಲ್ಪಿಸಿದರು. ಬಳಿಕ ಒಂದೊAದಾಗಿಯೇ ಕಾಡಾನೆಗಳು ಮೇಲೆ ಬಂದು ತೋಟ ಸೇರಿದವು.

ಕಾಡಾನೆಗಳ ಹಿಂಡು ತೀವ್ರ ಭಯಗೊಂಡಿರುವ ಹಿನ್ನೆಲೆಯಲ್ಲಿ ಇವುಗಳನ್ನು ತಕ್ಷಣಕ್ಕೆ ಕಾಡಿಗೆ ಓಡಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಕೈಗೊಳ್ಳದೆ ಸಂಜೆ ವೇಳೆ ಕಾಫಿ ತೋಟದಲ್ಲಿದ್ದ ಕಾಡಾನೆಗಳ ಹಿಂಡನ್ನು ಸಮೀಪದ ಬ್ರಹ್ಮಗಿರಿ ಅರಣ್ಯ ವ್ಯಾಪ್ತಿಯತ್ತ ಅಟ್ಟುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾದರು.

-ಹೆಚ್.ಕೆ.ಜಗದೀಶ್