ಕಣಿವೆ, ಏ. ೨೪: ಕಾಡಿನಿಂದ ಆಹಾರ, ನೀರು ಅರಸಿ ಜನವಸತಿ ಪ್ರದೇಶಕ್ಕೆ ಬಂದಿದ್ದ ಕಾಡಾನೆಯೊಂದು ಹಾಡಹಗಲೇ ಹೆದ್ದಾರಿಯಲ್ಲಿ ಹೆಜ್ಜೆ ಹಾಕಿ ವಾಹನ ಸವಾರರನ್ನು ಬೆಚ್ಚಿಬೀಳಿಸಿದ ಘಟನೆ ಏಳನೇ ಹೊಸಕೋಟೆಯಲ್ಲಿ ಬುಧವಾರ ಬೆಳಿಗ್ಗೆ ನಡೆಯಿತು.

ಏಳನೇ ಹೊಸಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ರಸ್ತೆಗಾಗಿ ಹೆದ್ದಾರಿಗೆ ಧಾವಿಸಿದ ಒಂಟಿ ಸಲಗ ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರನ್ನು ಕೆಲಕಾಲ ಬೆಚ್ಚಿಬೀಳಿಸಿತು.

ಕಾಡಾನೆಯನ್ನು ಕಂಡ ಸ್ಥಳೀಯ ಕೆಲವು ನಿವಾಸಿಗಳು ಬೊಬ್ಬೆ ಹೊಡೆದು ಎಚ್ಚರ ವಹಿಸುವಂತೆ ಇತರೇ ನಿವಾಸಿಗಳಿಗೆ ಮಾಹಿತಿ ನೀಡಿದರು.

ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿವರೆಗೂ ಬಂದ ಸಲಗ, ಗ್ರಾಮದ ಕಾಫಿ ಬೆಳೆಗಾರ ಮುರುಳಿ ಎಂಬವರ ಕಾಫಿ ತೋಟದ ಕಬ್ಬಿಣದ ಗೇಟನ್ನು ಕಿತ್ತೆಸೆದು ತೋಟದೊಳಕ್ಕೆ ತೆರಳಿತು. ಈ ಸಂದರ್ಭ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾಡಿದರು. ವರದಿ : ಕೆ.ಎಸ್. ಮೂರ್ತಿ