ಮತದಾನದ ಮಹತ್ವ

“ಮತದಾನವು ನಮ್ಮ ಹಕ್ಕು ಮಾತ್ರವಲ್ಲ. ನಮ್ಮ ಕರ್ತವ್ಯವೂ ಹೌದು.” ಇದು ದೇಶದ ನಾಗರಿಕರಾಗಿ ನಮಗೆ ಜವಾಬ್ದಾರಿಗಳನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ.

ಪ್ರಜಾಪ್ರಭುತ್ವ ಸರಕಾರ ಜನರಿಂದ ಜನರಿಗಾಗಿ ಜನರೇ ನಡೆಸುವ ಸರ್ಕಾರ. ಅಂದರೆ ಮತದಾರರು ತಮ್ಮ ಸರ್ಕಾರವನ್ನು ನಿಯಂತ್ರಿಸಲು ಮತದಾನವು ಒಂದು ಪ್ರಮುಖ ಮಾರ್ಗವಾಗಿದೆ. ದೇಶದ ವಿವಿಧ ನೀತಿಗಳು, ಕಾನೂನುಗಳು ಮತ್ತು ಮೂಲ ಸೌಕರ್ಯಗಳಿಗೆ ಬಹಳಷ್ಟು ಶಾಸಕರು ಜವಾಬ್ದಾರರಾಗಿರುತ್ತಾರೆ. ಮತ್ತು ಈ ನೀತಿಗಳು, ಕಾನೂನು ಮತ್ತು ಮೂಲ ಸೌಕರ್ಯಗಳು ಮತದಾನದ ಮೂಲಕ ಹೀಗೆ ಹೊರ ಹೊಮ್ಮಬೇಕು ಎಂಬುದಕ್ಕೆ ನಾವು ಜವಾಬ್ದಾರರಾಗಿದ್ದೇವೆ ಎಂದು ನಾವು ಅರಿತುಕೊಳ್ಳಬೇಕು.

ದೇಶದ ಸುಭದ್ರತೆಗೆ, ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡದೇ ಇದ್ದರೆ ಅದು ಬಹಳಷ್ಟು ಜನರ ಮೇಲೆ, ದೇಶದ ಮೇಲೆ ಪರಿಣಾಮ ಬಿರುತ್ತದೆ. ಆದ್ದರಿಂದ ಪ್ರತಿಯೊಬ್ಬರ ಮತವು ಕೂಡ ಮಹತ್ವದ್ದಾಗಿರುತ್ತದೆ. ಚುನಾವಣೆಯು ಪ್ರಜಾಪ್ರಭುತ್ವದ ಆಧಾರ ಸ್ತಂಬವಾಗಿ ಕಾರ್ಯನಿರ್ವಹಿಸುತ್ತದೆ. ಮತದಾನವು ಉತ್ತಮ ನಾಯಕನ ಆಯ್ಕೆಗಾಗಿ ಜನರಿಗೆ ಕೊಡುವ ಒಂದು ಅವಕಾಶ ಮತ್ತು ಹಕ್ಕು ಆಗಿರುತ್ತದೆ.

ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ

-ಬೊಳ್ಳಂಡ ಪ್ರಮೀಳಾ ಅಯ್ಯಪ್ಪ

ಡಬಲ್ ಒಲಂಪಿಯನ್, ಏಷಿಯನ್ ಗೇಮ್ಸ್ ಪದಕ ವಿಜೇತೆ

ರಾಜ್ಯೋತ್ಸವ ಪ್ರಶಸ್ತಿ ವಿಜೇತೆ

ಮತದಾನ ಪ್ರಜೆಯ ಹಕ್ಕು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಒಂದು ಅತ್ಯಂತ ಪ್ರಮುಖವಾದ ಅಂಶವಾಗಿದೆ. ಮತದಾನದ ಮೂಲಕವೇ ಜನಸಾಮಾನ್ಯರು ತಮ್ಮ ಪ್ರತಿನಿಧಿಗಳನ್ನು ಆ ಮೂಲಕ ಸರ್ಕಾರವನ್ನು ಆಯ್ಕೆ ಮಾಡಬೇಕಿದೆ. ಆದರೆ ಹಲವಾರು ಕಾರಣಗಳಿಂದ ಜನರು ಇತ್ತೀಚೆಗೆ ತಮ್ಮ ಮತವನ್ನು ಚಲಾಯಿಸುವುದರ ಬಗ್ಗೆ ನಿರಾಸಕ್ತಿಯನ್ನು ತಾಳುತ್ತಿದ್ದಾರೆ. ಇದರಿಂದಾಗಿ ಸುಸ್ಥಿರವಾದ ಸರ್ಕಾರದ ರಚನೆಗೆ ತೊಂದರೆಯಾಗುತ್ತದೆ. ಮತದಾನವು ಪ್ರತಿಯೊಬ್ಬ ಪ್ರಜೆಯ ಹಕ್ಕು. ಈ ಹಕ್ಕನ್ನು ಆತ ನಿರ್ಭೀತಿಯಿಂದ ಮತ್ತು ತನ್ನ ಮನಸ್ಸಿಗೆ ಬೇಕೆನಿಸಿದ ರೀತಿಯಲ್ಲಿ ಚಲಾಯಿಸಲು ಬೇಕಾದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಟ್ಟಿರುತ್ತದೆ. ಆದರೂ ಪಟ್ಟಭದ್ರ ಹಿತಾಸಕ್ತಿಗಳು ಹಣ, ವಸ್ತು, ಸಾರಾಯಿ ಮುಂತಾದವುಗಳ ಆಮಿಷವನ್ನು ಒಡ್ಡಿ ಮತವನ್ನು ಖರೀದಿಸುವ ಯತ್ನವನ್ನು ನಡೆಸುತ್ತವೆ. ಕೆಲವೊಮ್ಮೆ ಹಿಂಸೆ ಮತ್ತು ಭಯೋತ್ಪಾದನೆಯ ಮೂಲಕ ಜನರು ಮತಗಟ್ಟೆಗಳಿಗೆ ಹೋಗುವುದನ್ನು ನಿರ್ಬಂಧಿಸಿ ಮತದಾನ ನಡೆಯದಂತೆ ಮಾಡುವ ಪ್ರಯತ್ನವೂ ನಡೆಯುತ್ತದೆ. ಈ ಎಲ್ಲದರ ವಿರುದ್ಧವೂ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ. ಹಲವು ವಿದ್ಯಾವಂತರು ಅನಾಸಕ್ತಿ ಮತ್ತು ಬೇಜವಾಬ್ದಾರಿತನದಿಂದ ಮತದಾನದಿಂದ ದೂರ ಉಳಿಯುತ್ತಾರೆ.

ತಾನು ನೀಡುವ ಪ್ರತಿಯೊಂದು ಮತವೂ ಸದೃಢವಾದ ಸಮಾಜ ಮತ್ತು ಸರಕಾರದ ರಚನೆಯಲ್ಲಿ ಕೈಜೋಡಿಸಬೇಕಿದೆ. ಮತದಾನದ ಪ್ರಮಾಣ ಹೆಚ್ಚಾದಲ್ಲಿ ಎಲ್ಲರ ಶ್ರಮ ಸಾರ್ಥಕವಾಗುತ್ತದೆ.

-ಪಿ.ಬಿ. ಜನಾರ್ಧನ್, ಅಧ್ಯಕ್ಷರು,

ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜವಿಶ್ವದಲ್ಲೇ ಅತೀ ದೊಡ್ಡ ಚುನಾವಣೆ ನಮ್ಮದು

ವಿಶ್ವದಲ್ಲೇ ಅತಿದೊಡ್ಡ ಪ್ರಜಾಸತ್ತಾತ್ಮಕ ರಾಷ್ಟç ನಮ್ಮದು. ಆದುದರಿಂದಲೇ ವಿಶ್ವದಲ್ಲೇ ಅತಿ ದೊಡ್ಡ ಚುನಾವಣಾ ಪ್ರಕ್ರಿಯೆ ನಮ್ಮದು. ಕಳದೆ ೮ ದಶಕಗಳಿಂದ ನಾವು ಅನುಭವಿಸಿಕೊಂಡು ಬರುತ್ತಿರುವ ಹತ್ತು ಹಲವು ಹಕ್ಕುಗಳಿಗೆ ಈ ವಿಶೇಷತೆಯೇ ಕಾರಣ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಬಹಳ ಮಹತ್ವವಿದೆ. ಮತದಾನದ ವ್ಯವಸ್ಥೆ ಇಲ್ಲದ ಪ್ರಜಾಪ್ರಭುತ್ವ ಅರ್ಥಹೀನ.

ಚುನಾವಣೆಯ ಮೂಲಕ ನಮ್ಮ ಜನಪ್ರತಿನಿಧಿಗಳ ಸಾಂವಿಧಾನಿಕ ಹೊಣೆಗಾರಿಕೆಗಳು, ಅವರ ಪ್ರತಿನಿಧಿತ್ವದ ಕಲ್ಪನೆ, ಕೋಮು ಸಾಮರಸ್ಯ, ನೈತಿಕ ಮೌಲ್ಯಗಳು ಹಾಗೂ ಜನತೆಯ ನೈಜ ಸೇವೆಯ ಕಲ್ಪನೆಗಳನ್ನು ನಾವು ಚುನಾವಣೆ ಮೂಲಕ ನೆನಪಿಸಬೇಕು. ಮಾತ್ರವಲ್ಲ, ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ನಿರ್ವಹಿಸಿದಲ್ಲಿ ಅವರನ್ನು ಹಿಂದಕ್ಕೆ ಕರೆಸುವ ಹಕ್ಕೂ ಜನತೆಗೆ ಲಭಿಸಬೇಕು.

ನಮ್ಮ ಆಯ್ಕೆ ಸಮುದಾಯಗಳ ವಿಷಯವಾಗದೆ ಸಾಮಾಜಿಕ ನ್ಯಾಯದ ಬೇಡಿಕೆಯೆಂದು ಪರಿಗಣಿತವಾಗಬೇಕು. ಚುನಾವಣೆಯ ಮೂಲಕ ಧರ್ಮ ನಿರಪೇಕ್ಷತೆಯ ರಕ್ಷಣೆ ಆಗಬೇಕು. ನಮ್ಮ ಮತದಾನದ ಮೂಲಕ ಎಲ್ಲಾ ಸಂಸ್ಕೃತಿಗಳ ಪ್ರಗತಿಗೆ ಹಾದಿ ಸುಗಮವಾಗಬೇಕಿದೆ.

ಚುನಾವಣೆಗಳು ಪ್ರಾಮಾಣಿಕವಾಗಿ ಶಾಂತಿಯುತವಾಗಿ ನಡೆಯುವುದರ ಮುಖಾಂತರ ಪ್ರಜಾಪ್ರಭುತ್ವದ ಗೌರವ ಘನತೆಯನ್ನು ಉಳಿಸಬೇಕು. ಸಂವಿಧಾನ ಬದ್ದವಾಗಿ ನಡೆಯುತ್ತಿರುವ ಈ ಪ್ರಕ್ರಿಯೆಯ ಬಗ್ಗೆ ಜನತೆಗೆ ಬಹಳ ಗೌರವ ಮತ್ತು

ಆದರವಿದೆ

ಎಂಬುದರಲ್ಲಿ

ಸಂಶಯವಿಲ್ಲ.

-ಪಿ.ಕೆ. ಅಬ್ದುಲ್ ರೆಹೆಮಾನ್,

ಜಿಲ್ಲಾ ಸಂಚಾಲಕರು,

ಜಮಾಅತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲೆಹೆತ್ತ ತಾಯಿ ಹೊತ್ತ ನಾಡು

ಸ್ವರ್ಗಕ್ಕಿಂತಲೂ ಮಿಗಿಲು

ಈ ಗಾದೆ ಮಾತನ್ನು ನೀವೆಲ್ಲರೂ ಕೇಳಿರಬಹುದು. ಹೆತ್ತ ತಾಯಿಯನ್ನು ನಾವೆಷ್ಟು ಪ್ರೀತಿಸುತ್ತೇವೋ, ಆರಾಧಿಸುತ್ತೇವೆಯೋ ಅಷ್ಟೇ ನಮ್ಮನ್ನು ಹೊತ್ತು ನಿಂತಿರುವ ನಾಡನ್ನು ಪ್ರೀತಿಸಬೇಕು, ಆರಾಧಿಸಬೇಕು. ಈ ಪ್ರೀತಿ ಗೌರವ, ಆರಾಧನೆ ನಮ್ಮಲ್ಲಿದ್ದಾಗ ನಮ್ಮನ್ನು ಹೊತ್ತ ನಾಡು ಸ್ವರ್ಗ ಲೋಕವಾಗುವುದು. ಆ ಸ್ವರ್ಗಲೋಕವನ್ನು ಸೃಷ್ಟಿಸುವ ಅಧಿಕಾರ ಭಾರತದ ಸಂವಿಧಾನವು ಮತದಾರ ಪ್ರಭುಗಳಿಗೆ ನೀಡಿದೆ.

ಮತದಾನವು ಪ್ರತಿ ಪ್ರಜೆಯ ಹಕ್ಕು ಮತ್ತು ಕರ್ತವ್ಯ. ಈ ಹಕ್ಕನ್ನು ಯಾವುದೇ ಜಾತಿ, ಮತ, ಧರ್ಮ ಪಕ್ಷಬೇದವಿಲ್ಲದೆ ನಿರ್ಭೀತಿಯಿಂದ ದೇಶದ ಏಳಿಗೆಗೋಸ್ಕರವೇ ನನ್ನ ಮತ ಎಂಬ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ಮತ ಚಲಾಯಿಸೋಣ. ನಮ್ಮ ಒಂದು ಮತ ಸದೃಢವಾದ ಸಮಾಜ ಮತ್ತು ಸರಕಾರದ ರಚನೆಯಲ್ಲಿ ಪರಿಣಾಮಕಾರಿಯಾದ ಪಾತ್ರ ವಹಿಸುತ್ತದೆ.

ಮತದಾನವನ್ನು ಸಂಭ್ರಮಿಸಿದಾಗ ಮಾತ್ರ ದೇಶ ಬದಲಾಗುತ್ತದೆ. ದೇಶವನ್ನು ಪ್ರೀತಿಸುವವರು ಖಂಡಿತವಾಗಿಯೂ ಸೂಕ್ತ ನಾಯಕನನ್ನು ಆರಿಸುತ್ತಾರೆ. ನನ್ನ ಮತ ದೇಶದ ಅಭಿವೃದ್ಧಿಗಾಗಿ ಎಂಬ ಧೋರಣೆ ಪ್ರತಿ ಮತದಾರರ ಮನದಲ್ಲಿ ಮೂಡಿದರೆ ಸ್ವರ್ಗಲೋಕ ನೋಡಲು ನಾವು ಮೇಲೆ ಹೋಗಬೇಕಾಗಿಲ್ಲ. ಅದು ನಾವಿರುವ ಪುಣ್ಯಭೂಮಿ ನಮ್ಮ ಹೆಮ್ಮೆಯ ದೇಶದಲ್ಲೇ ಅನುಭವಿಸಬಹುದು.

ಮತದಾನ ನಮ್ಮೆಲ್ಲರ ಹಕ್ಕು ತಪ್ಪದೇ ಓಟು ಮಾಡೋಣ.

-ತೆಕ್ಕಡಮ್ಮಂಡ ರಾಕ್ಮಿ ಪ್ರವೀಣ್,

ಬರಹಗಾರ್ತಿ, ಪೊನ್ನಂಪೇಟೆ