ಚೆಯ್ಯಂಡಾಣೆ, ಏ. ೨೩: ಕಾನೂನು ಸುವ್ಯವಸ್ಥೆ ಕಾಪಾಡಿ ಕೊಂಡು ಉರೂಸ್ ಆಚರಿಸುವಂತೆ ಡಿವೈಎಸ್ಪಿ ಮಹೇಶ್ ಕುಮಾರ್ ಸೂಚನೆ ನೀಡಿದರು.
ತಾ. ೨೬ ರಿಂದ ಮೇ ೩ ರವರೆಗೆ ನಡೆಯಲಿರುವ ಇತಿಹಾಸ ಪ್ರಸಿದ್ಧ ಎಮ್ಮೆಮಾಡುವಿನ ಸೂಫಿ ಶಹೀದ್ ವಲಿಯುಲ್ಲಾಹಿಯವರ ಉರೂಸ್ ಸಮಾರಂಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಮ್ಮೆಮಾಡು ಜಮಾಅತ್ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಸಭೆ ನಡೆಯಿತು.
ಎಮ್ಮೆಮಾಡುವಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಕಚೇರಿಯಲ್ಲಿ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಆಚರಣೆಯಲ್ಲಿ ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯದಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವುದರಿಂದ ಸುರಕ್ಷತೆ ಬಹಳ ಮುಖ್ಯವಾಗಿದೆ. ಪ್ರಮುಖವಾಗಿ ವಾಹನ ನಿಲುಗಡೆ ಸೌಲಭ್ಯ, ಟ್ರಾಫಿಕ್ ಸಮಸ್ಯೆ ಆಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿ ಜನರಿಗೆ ಸುಗಮ ಸಂಚಾರದ ವ್ಯವಸ್ಥೆ ಆಗಬೇಕಾಗಿದೆ. ಅಂಗಡಿ ವ್ಯಾಪಾರಕ್ಕೆ ಅನುವು ಮಾಡಿಕೊಡುವಾಗ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ಸಮಸ್ಯೆ ಆಗದ ರೀತಿ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಅವಕಾಶ ನೀಡಬೇಕು. ಪೊಲೀಸ್ ಇಲಾಖೆಯೊಂದಿಗೆ ಗ್ರಾಮಸ್ಥರು ಕೂಡ ಸ್ವಯಂ ಸೇವಕರಾಗಿ ಸಹಕಾರ ನೀಡಬೇಕು ಎಂದರು.
ಊರೂಸ್ ಕಾರ್ಯಕ್ರಮದಲ್ಲಿ ಯಾವುದೇ ಅಡಚಣೆಯಾಗದ ಹಾಗೆ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ವ್ಯವಸ್ಥಿತವಾಗಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲು ಸ್ಥಳೀಯವಾಗಿ ಎಲ್ಲಾ ಧರ್ಮ ಬಾಂಧವರನ್ನು ಸೇರಿಸಿ ಶಾಂತಿ ಸಭೆ ಕರೆಯಬೇಕಾಗಿದೆ. ಯಾರಿಗೂ ಕೂಡ ಕಿರಿಕಿರಿ ಉಂಟಾಗದ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಕೂಡ ಬೇಕಾಗಿದೆ ಎಂದು ತಿಳಿಸಿದರು.
ಜಮಾಅತ್ ಉಪಾಧ್ಯಕ್ಷ ಮೊಹಮ್ಮದ್ ಅಶ್ರಫ್ ಮಾತನಾಡಿ, ಪ್ರತಿ ವರ್ಷ ಆಚರಿಸುವಂತೆ ಈ ವರ್ಷವು ಕೂಡ ಉರೂಸ್ ಕಾರ್ಯ ಕ್ರಮವನ್ನು ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಲಾಗಿದೆ. ಶಾಲಾ, ಕಾಲೇಜು, ಮದರಸ ವಿದ್ಯಾರ್ಥಿಗಳ ರಜೆಯನ್ನು ಪರಿಗಣಿಸಿ ಈ ಉರೂಸ್ ಕಾರ್ಯಕ್ರಮವನ್ನು ಏಪ್ರಿಲ್ ೨೬ ರಿಂದ ಮೇ ೩ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಸಲು ತೀರ್ಮಾನಿಸ ಲಾಗಿದೆ. ಪ್ರಾರಂಭ ದಿನವಾದ ತಾ.೨೬ ರಂದೇ ಲೋಕಸಭಾ ಚುನಾವಣೆ ಕೂಡ ನಡೆಯಲಿದ್ದು, ನೀತಿ ಸಂಹಿತೆಯನ್ನು ಪಾಲಿಸಿ ಕಾರ್ಯಕ್ರಮ ಆಚರಿಸಲು ಜಮಾಅತ್ ಆಡಳಿತ ಮಂಡಳಿ ಹಾಗೂ ಊರಿನವರು ತೀರ್ಮಾನಿಸಿದ್ದೇವೆ. ತಾ.೨೯ ಮತ್ತು ಮೇ ೩ ರಂದು ಅನ್ನಸಂತರ್ಪಣೆ ನಡೆಯಲಿದೆ. ಈ ದಿನಗಳಲ್ಲಿ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಉರೂಸ್ ಕಾರ್ಯ ಕ್ರಮವನ್ನು ಯಶಸ್ವಿಯಾಗಿ ನಡೆಸಲು ಪೊಲೀಸ್ ಇಲಾಖೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಭೆಯ ಬಳಿಕ ಡಿವೈಎಸ್ಪಿ ಮಹೇಶ್ ಕುಮಾರ್; ವಾಹನ ನಿಲುಗಡೆ ಹಾಗೂ ಅಂಗಡಿ ಮುಂಗಟ್ಟುಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಎಲ್. ಅರುಣ್, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಜಮಾಅತ್ ಕಾರ್ಯದರ್ಶಿ ಸಿ.ಕೆ. ಹಾರಿಸ್, ಎಮ್ಮೆಮಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಚಕ್ಕೇರ ಇಸ್ಮಾಯಿಲ್, ಗಫೂರ್ ಪಲಂಗೋಟ್, ಜಮಾಅತ್ ಮಾಜಿ ಅಧ್ಯಕ್ಷ ಎನ್.ಎ. ಆಲಿಕುಟ್ಟಿ, ಸಮಿತಿ ಸದಸ್ಯರಾದ ಸಿ.ಎಸ್. ಇಬ್ರಾಹಿಂ, ಕೆ.ಎ. ಉಸ್ಮಾನ್, ಹಂಸ ಸಅದಿ, ಲತೀಫ್, ಮತ್ತಿತರರು ಹಾಜರಿದ್ದರು.
- ಅಶ್ರಫ್