ಕಣಿವೆ, ಏ. ೨೨ : ಭೂಮಿಯ ಕಂಪನದ ಅರಿವು ಮೊದಲು ಸಿಗುವುದೇ ಶ್ವಾನ, ಬೆಕ್ಕು ಹಾಗೂ ಕೋಳಿಗಳಿಗೆ.
ನಿಸರ್ಗದಲ್ಲಾಗುವ ಪ್ರಕೃತಿ ವಿಕೋಪ ಅಥವಾ ಯಾವುದೇ ಏರಿಳಿತಗಳ ಸುಳಿವು ಹಾಗೂ ಅರಿವು ಪ್ರತೀ ಜೀವಿಗಳಿಗೂ ದೇವರು ಕೊಟ್ಟ ವರ.
ಹಾಗೆಯೇ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿದ್ದಂತಹ ದೊಡ್ಡ ಗಾತ್ರದ ಮೀನುಗಳು ಹಾಗೂ ಇತರೇ ಸಾಮಾನ್ಯ ಮೀನುಗಳಿಗೆ ಕಾವೇರಿ ನದಿ ಒಣಗಿ ಬಟಾ ಬಯಲಾಗುವ ಚಿತ್ರಣದ ಅರಿವು ಈ ಜೀವಿಗಳಿಗೆ ಏನಾದರೂ ತಿಳಿದಿತ್ತಾ ...? ಎಂಬ ಪ್ರಶ್ನೆ ನಿಸರ್ಗಧಾಮದ ಕೆಲವು ಸಿಬ್ಬಂದಿಗಳದು.
ಮಳೆಯ ಸುಳಿವೇ ಇಲ್ಲದೇ, ಬಿಸಿಲ ತಾಪ ಹೆಚ್ಚಾಗಿ ನದಿಯಲ್ಲಿ ನೀರಿನ ಹರಿವು ಸ್ಥಗಿತವಾಗುವ ಅಪಾಯ ಅರಿತ ಇಲ್ಲಿನ ಮೀನುಗಳು ನದಿಯ ಹಿಂಭಾಗದ ತೆಪ್ಪದ ಕಂಡಿಯಲ್ಲಿನ ವಿಶಾಲ ಪ್ರದೇಶದ ಆಳವಾದ ನದಿಯ ನೀರಿಗೆ ಪಯಣ ಬೆಳೆಸಿವೆ ಎಂಬುದು ಅರಣ್ಯ ಇಲಾಖೆ ಸಿಬ್ಬಂದಿ ಮಂಜು ಅವರ ವಾದ.
ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸಿ ನೀರಿನ ಒರತೆಯೂ ಕೂಡ ಇಲ್ಲದ ಸ್ಥಿತಿ ಉಂಟಾಗುತ್ತದೆ. ಪರಿಸ್ಥಿತಿ ಹೀಗೆಯೇ ಆದರೆ ನಮ್ಮ ಉಳಿಗಾಲವಿಲ್ಲ ಎಂಬುದನ್ನು ತಿಳಿದು ನದಿಯಲ್ಲಿ ನೀರಿನ ಸಣ್ಣ ಪ್ರಮಾಣದ ಹರಿವು ಇದ್ದ ದಿನಗಳಲ್ಲಿ ಹಿಮ್ಮುಖವಾಗಿಯೇ ಇಲ್ಲಿನ ಮೀನುಗಳು ಸಾಗಿ ತೆಪ್ಪದ ಕಂಡಿಯ ಹೊಳೆಯನ್ನು ಸೇರಿವೆ ಎಂದು ಪರಿಸರ ಪ್ರೇಮಿ ಮಂಜಣ್ಣ ಹೇಳುತ್ತಾರೆ.
ನಿಸರ್ಗಧಾಮದ ತೂಗು ಸೇತುವೆ ಬಳಿ ಇದ್ದಂತಹ ಸಣ್ಣ ಪುಟ್ಟ ಮೀನುಗಳ ಉಸಿರಾಟಕ್ಕೆ ಆಮ್ಲಜನಕದ ಕೊರತೆಯಾಗದಂತೆ ಒಂದಷ್ಟು ದಿನ ಪೈಪ್ನಲ್ಲಿ ನೀರು ಸರಬರಾಜು ಮಾಡಿದೆವು. ಆದರೆ ಕೊನೆಗೆ ಅದೂ ಕೂಡ ಸಾಧ್ಯವಾಗಲಿಲ್ಲ. ನೋಡ ನೋಡುತ್ತಿದ್ದಂತೆಯೇ ಸಣ್ಣ ಮೀನುಗಳು ಜೀವ ಬಿಟ್ಟವು. ದೊಡ್ಡ ಮೀನುಗಳು ಪ್ರಕೃತಿಯ ಇಂತಹ ಬರದ ಅವಲಕ್ಷಣ ಅರಿತು ಮೊದಲೇ ಬೇರೆಡೆಗೆ ತೆರಳಿವೆ ಎಂಬುದು ಅವರ ವಾದ.
ಏನೇ ಇರಲಿ, ನಿಸರ್ಗದ ಸಮತೋಲನದ ಜೀವ ಜಾಲ ಕ್ರಿಮಿ ಕೀಟಗಳಿಂದ ಹಿಡಿದು, ಪ್ರಾಣಿ ಪಕ್ಷಿಗಳ ತನಕವೂ ಬೇಕಿರುವ ಜೀವ ಸಂಜೀವಿನಿ ನೀರನ್ನು ಹರಿಸುವ ವರುಣ ಆದಷ್ಟು ಬೇಗ ಕೃಪೆ ಮಾಡಬೇಕಿದೆ ಅಷ್ಟೆ.
- ಕೆ.ಎಸ್. ಮೂರ್ತಿ, ಕಣಿವೆ