ಮಡಿಕೇರಿ, ಏ. ೨೨: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ೧೦ ವರ್ಷದ ಬಾಲಕಿ ಸಿಂಚನಾ ಒಂದು ನಿಮಿಷದಲ್ಲಿ ೧೦ ಬಾರಿ ಚಕ್ರಾಸನ ಹೋಲುವ ಕಲಾತ್ಮಕ ಯೋಗದ ಲೆಗ್ ರೊಟೇಷನ್ ಭಂಗಿಯನ್ನು ಪೂರ್ಣಗೊಳಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ್ದಾರೆ.
ಇದರೊಂದಿಗೆ ಹಲವಾರು ಕಲಾತ್ಮಕ ಯೋಗದ ಒಂದು ಭಂಗಿಯನ್ನು ಮಾಡುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ. ಮದೆನಾಡಿನ ಕಾಫಿ ಉದ್ಯಮಿ, ಸಿಂಚನಾ ಕಾಫಿ ಲಿಂಕ್ಸ್ ಮಾಲೀಕರಾದ ಕೀರ್ತಿಕುಮಾರ್ ಹಾಗೂ ರೇಣುಕಾ ದಂಪತಿಯ ಪುತ್ರಿಯಾಗಿರುವ ಸಿಂಚನಾ ಮದೆನಾಡಿನ ಬಿಜಿಎಸ್ ಶಾಲೆಯ ೫ ನೇ ತರಗತಿ ವಿದ್ಯಾರ್ಥಿನಿ.
ಅಭ್ಯಾಸದ ವೇಳೆ ನಿಮಿಷಕ್ಕೆ ೧೦ ಬಾರಿ ಈ ಮಾದರಿಯ ಯೋಗ ಪೂರ್ಣಗೊಳಿಸುತ್ತಿದ್ದ ಸಿಂಚನಾ ಪ್ರಸ್ತುತ ೨೦ ಕ್ಕೂ ಅಧಿಕ ಬಾರಿ ಈ ವಿಶೇಷ ಯೋಗ ಮಾದರಿ ಮಾಡುತ್ತಾರೆ.
ತಾಯಿ ರೇಣುಕಾ ಅವರು ಯೂಟ್ಯೂಬ್ನಲ್ಲಿ ಯೋಗದ ವಿವಿಧ ಭಂಗಿಗಳನ್ನು ನೋಡಿ ತಾನೂ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ಮಗಳು ಸಿಂಚನ ಕೂಡ ತಾಯಿಯೊಂದಿಗೆ ಯೋಗಾಭ್ಯಾಸ ಮಾಡುತ್ತಿದ್ದಳು. ಅವಳ ಆಸಕ್ತಿಯನ್ನು ಗಮನಿಸಿದ ರೇಣುಕಾ ಹೆಚ್ಚಿನ ಆಸಕ್ತಿ ವಹಿಸಿ ಆಕೆಗೆ ತರಬೇತಿ ನೀಡಿದರು.
ಸಿಂಚನಾ ಚಕ್ರಾಸನ ಲೆಗ್ ರೊಟೇಷನ್ ಹಾಗೂ ಇದರೊಂದಿಗೆ ಹಲವಾರು ಯೋಗ ಭಂಗಿಗಳನ್ನು ಮಾಡುತ್ತಾಳೆ. ತಾ. ೧೩ ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ಪಡೆದುಕೊಂಡಿದ್ದಾಳೆ.