ಸಿದ್ದಾಪುರ, ಏ. ೨೨: ಕಾಫಿ ತೋಟಗಳಲ್ಲಿ ಉಪಟಳ ನೀಡುತ್ತಾ ಮಾನವನ ಮೇಲೆ ದಾಳಿ ನಡೆಸಿ ಹತ್ಯೆ ಮಾಡುತ್ತಿದ್ದ ಪುಂಡಾನೆಯನ್ನು ಸಕಲೇಶಪುರ ತಾಲೂಕಿನಲ್ಲಿ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರದ ಕ್ರಾಲ್‌ನಲ್ಲಿ ಇರಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ಸಲಗವೊಂದನ್ನು ಸೆರೆಹಿಡಿದು ದುಬಾರೆ ಶಿಬಿರದ ಕ್ರಾಲ್‌ನಲ್ಲಿ ಇಡಲಾಗಿತ್ತು. ಇದೀಗ ಹಾಸನ ಜಿಲ್ಲೆಯ ಸಕಲೇಶಪುರದ ಗ್ರಾಮವೊಂದರ ಉಪಟಳ ನೀಡುತ್ತಿದ್ದ ಹಾಗೂ ಮಾನವನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಸಲಗವನ್ನು ಭಾನುವಾರದಂದು ಸಾಕಾನೆಗಳ ನೆರವಿನಿಂದ ಸೆರೆ ಹಿಡಿಯಲಾಗಿತ್ತು ಅಂದಾಜು ೨೪ ವರ್ಷ ಪ್ರಾಯದ ಪುಂಡಾನೆಯನ್ನು ಸೆರೆ ಹಿಡಿದ ಬಳಿಕ ಅದನ್ನು ಪಳಗಿಸಲು ಭಾನುವಾರ ರಾತ್ರಿ ಲಾರಿಯ ಮೂಲಕ ದುಬಾರೆಗೆ ಕರೆತರಲಾಯಿತು. ಪುಂಡಾನೆಯು ಕ್ರಾಲ್ ಒಳಗಡೆ ತೆರಳಲು ಹಿಂದೇಟು ಹಾಕುತ್ತಾ ತನ್ನ ಪುಂಡಾಟವನ್ನು ಪ್ರದರ್ಶಿಸಿತು. ಕೆಲ ಸಮಯ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಹಾಗೂ ಮಾವುತ ಕಾವಾಡಿಗರನ್ನು ಸುಸ್ತಾಗುವಂತೆ ಮಾಡಿತು. ಕೊನೆಗೆ ಸ್ಥಳೀಯ ಸಾಕಾನೆಗಳ ಸಹಕಾರದಿಂದ ಸಲಗವನ್ನು ಕ್ರಾಲ್‌ನಲ್ಲಿ ಇರಿಸಲಾಯಿತು.

ಉಪಟಳ ನೀಡುತಿದ್ದ ಪುಂಡಾನೆ ಸೆರೆ

(ಮೊದಲ ಪುಟದಿಂದ) ಇದೀಗ ದುಬಾರೆ ಶಿಬಿರದಲ್ಲಿ ಎರಡು ಕಾಡಾನೆಗಳನ್ನು ಪಳಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಿದ್ಧತೆ ನಡೆಸಿದ್ದಾರೆ. ನುರಿತ ಕಾವಾಡಿಗರು ಹಾಗೂ ಮಾವುತರು ಈ ಎರಡು ಕಾಡಾನೆಗಳನ್ನು ಪಳಗಿಸಿದ ನಂತರ ಅವುಗಳನ್ನು ಶಿಬಿರದಲ್ಲಿರುವ ಆನೆಗಳೊಂದಿಗೆ ಬಿಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಹಾಗೂ ಹೊರ ಜಿಲ್ಲೆಯಲ್ಲಿ ಸೆರೆಹಿಡಿದ ಕಾಡಾನೆಗಳನ್ನು ದುಬಾರೆಯ ಶಿಬಿರದಲ್ಲಿ ಪಳಗಿಸಿ ನಂತರ ಅವುಗಳಿಗೆ ನಾಮಕರಣ ಮಾಡಿ ಹೊರ ಬಿಡಲಾಗಿದೆ ಕಾಫಿ ತೋಟಗಳಿಂದ ಸೆರೆಹಿಡಿದು ತಂದಿರುವ ಕಾಡಾನೆಗಳ ಬಳಿ ಪ್ರವಾಸಿಗರಿಗೆ ತೆರಳಲು ನಿರ್ಬಂಧ ವಿಧಿಸಲಾಗಿದೆ. ಜಿಲ್ಲೆಯಲ್ಲೂ ಕೂಡ ಉಪಟಳ ನೀಡುವ ಕಾಡಾನೆಗಳನ್ನು ಸೆರೆ ಹಿಡಿಯಲು ಈಗಾಗಲೇ ಅನುಮತಿ ದೊರೆತಿದ್ದು, ಮುಂದಿನ ದಿನಗಳಲ್ಲಿ ದುಬಾರೆ ಶಿಬಿರಕ್ಕೆ ಮತ್ತಷ್ಟು ಕಾಡಾನೆಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

-ವಾಸು