ವೀರಾಜಪೇಟೆ, ಏ. ೨೨: ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ರಾಜಕೀಯ ಪಕ್ಷವನ್ನು ಬದಿಗೊತ್ತಿ ಸಮಾನ ಸಮಾಜದ ಅಭಿವೃದ್ದಿ ಶೋಷಿತ ಸಮುದಾಯವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಮನವಿ ಮಾಡಿದರು.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕದ ಮತ್ತು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಬಿಟ್ಟಂಗಾಲ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶ ಮತ್ತು ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ರಾಜಕೀಯ ಮಾಡುವುದು ಸಂವಿಧಾನದ ವಿರೋಧವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು ಎಂಬ ತತ್ವ ಸಿದ್ಧಾಂತದ ಮೇಲೆ ರಾಜಕೀಯ ಮಾಡುವುದು ಕಾಂಗ್ರೆಸ್ ಪಕ್ಷದ ಧ್ಯೇಯವಾಗಿದೆ ಎಂದರು.

ಕಳೆದ ೧೦ ವರ್ಷದ ಅವಧಿಯಲ್ಲಿ ಸಂಸದರಾದ ಪ್ರತಾಪ್ ಸಿಂಹ ಅವರು ಕೊಡಗು ಜಿಲ್ಲೆಗೆ ಯಾವುದೇ ಅಭಿವೃದ್ಧಿ ಮಾಡಲಿಲ್ಲ; ತಾವು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಸುಮಾರು ೨೦೦ ಕೋಟಿಗೂ ಅಧಿಕ ಕಾಮಾಗಾರಿಗಳಿಗೆ ಚಾಲನೆ ದೊರೆತಿದೆ. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ರಾಜ್ಯ ಸರ್ಕಾರವು ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿದೆ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಅವರು ಮಾತನಾಡಿ, ಅಂದಿನ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಅವರ ಆಡಳಿತ ಸಂದರ್ಭದಲ್ಲಿ ಜಾರಿಗೆ ತಂದ ಹಲವು ಯೋಜನೆಗಳಿಗೆ ಹೊಸ ರೂಪ ನೀಡಿ ಇಂದು ಭಾ.ಜ.ಪ ನಾವು ಮಾಡಿದ್ದು ಎಂದು ಹೇಳುತ್ತಾ ರಾಜಕೀಯ ಮಾಡುತ್ತಿದೆ. ಬಡವರಿಗೆ ಅನ್ನ ಯೋಜನೆಯನ್ನು ಜಾರಿಗೆ ತಂದಿದ್ದೇ ಮನಮೋಹನ್ ಸಿಂಗ್ ಎಂದರು. ಪ್ರಚಾರ ಸಮಿತಿಯ ಅಧ್ಯಕ್ಷÀ ಟಿ.ಪಿ. ರಮೇಶ್ ಅವರು ಮಾತನಾಡಿ ಕೋಮುವಾದ ಸೃಷ್ಟಿ ಮಾಡಿ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ಪಕ್ಷವನ್ನು ತೊಲಗಿಸಿ. ಸಮಾನತೆಯ ಪರ, ಸರ್ವ ಧರ್ಮ ಒಂದು ಎಂಬ ಭಾವನೆಯ ಮೇಲೆ ನೆಲೆ ನಿಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು. ನಿವೃತ್ತ ಶಿಕ್ಷಕರಾದ ವೀರಭದ್ರಯ್ಯ, ಕುಡಿಯರ ಮುತ್ತಪ್ಪ ಅವರು ಮಾತನಾಡಿದರು.

ಮೊದಲಿಗೆ ಬಿಟ್ಟಂಗಾಲ ಜಂಕ್ಷನ್‌ನಿAದ ಹೆಗ್ಗಡೆ ಸಮಾಜದವರೆಗೆ ಬೃಹತ್ ಸಂಖ್ಯೆಯಲ್ಲಿ ಜಾಥಾ ನಡೆಯಿತು. ನಾಗರಹೊಳೆ ಗಿರಿಜನ ಅಭಿವೃದ್ದಿ ಸಂಘದ ಸದಸ್ಯರಿಂದ ಗಿರಿಜನರ ಜಾನಪದ ಕಲೆ ಮೆರಗು ನೀಡಿತು.

ವೇದಿಕೆಯಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ.ಬಿ. ಶಾಂತಪ್ಪ, ಕಾಫಿ ಮಂಡಳಿಯ ಮಾಜಿ ಸದಸ್ಯೆ ತಾರಾ ಅಯ್ಯಮ್ಮ, ಬಾನಂಡ ಪ್ರಥ್ವಿ, ಜಿಲ್ಲಾ ಎಸ್.ಸಿ. ಘಟಕದ ಜಯೇಂದ್ರ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ವಿ.ಕೆ. ಸತೀಶ್, ವೀರಾಜಪೇಟೆ ಬ್ಲಾಕ್ ಎಸ್.ಸಿ ಘಟಕದ ಅಧ್ಯಕ್ಷ ಮಹದೇವ, ಎಸ್.ಟಿ. ಘಟಕದ ಶಿವಣ್ಣ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಮತ್ತು ಪಕ್ಷದ ಪ್ರಮುಖರು ಉಪಸ್ಥಿರಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ