ಮಡಿಕೇರಿ, ಏ. ೨೧: ಲೋಕಸಭಾ ಚುನಾವಣೆ ದೇಶದಲ್ಲಿ ಹಲವು ವಿನೂತನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಸಿನಿಮಾ ತಾರೆಗಳು, ಕ್ರೀಡಾಪಟುಗಳು, ಪತ್ರಕರ್ತರು, ಸಾಹಿತಿಗಳು ಲೋಕಸಭಾ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಇತಿಹಾಸ ಇದೆ. ಆದರೆ ಮತದಾರರು ಎಲ್ಲಾ ಸ್ಟಾರ್‌ಗಳ ಕೈ ಹಿಡಿದಿಲ್ಲ.

ವಿವಿಧ ಕ್ಷೇತ್ರಗಳಿಂದ ರಾಜಕೀಯಕ್ಕೆ ಎಂಟ್ರಿಯಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿ, ರಾಜಕೀಯವನ್ನೇ ತಮ್ಮ ಕ್ಷೇತ್ರವನ್ನಾಗಿ ಮಾರ್ಪಾಡು ಮಾಡಿದವರಿದ್ದಾರೆ. ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಮುಖ್ಯಮಂತ್ರಿ ಕೂಡ ಆದವರಿದ್ದಾರೆ. ಎಲ್ಲೂ ಸಲ್ಲದವರು ರಾಜಕೀಯದಲ್ಲಿ ಸಲ್ಲುತ್ತಾರೆ, ಇಲ್ಲಿ ಸರ್ಟಿಫಿಕೇಟ್ ಅವಶ್ಯಕತೆಯಿಲ್ಲ.

ವಿಶೇಷವೇನೆಂದರೆ ಕೊಡಗಿನ ಹೆಮ್ಮೆಯ ಸುಪುತ್ರ ಸ್ವತಂತ್ರ ಭಾರತದ ಮೊದಲ ದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದ ವಿಷಯ ಬಹುತೇಕರಿಗೆ ತಿಳಿದಿರದ ವಿಷಯ.

ಇದೇನಾಪ್ಪಾ ಕೆ.ಎಂ. ಕಾರ್ಯಪ್ಪ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ರಾ? ಎಂದು ಅಚ್ಚರಿಪಡಬೇಡಿ. ಹೌದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಕರ್ನಾಟಕದ ತಮ್ಮ ತವರೂರು ಕೊಡಗು-ಮಂಗಳೂರು ಕ್ಷೇತ್ರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.

೧೯೭೧ ರಲ್ಲಿ ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರವಾಗಿತ್ತು. ತಮ್ಮ ಹುಟ್ಟೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳದೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಮಹಾರಾಷ್ಟçದ ಬಾಂಬೆ ಈಶಾನ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಕೆ.ಎಂ. ಕಾರ್ಯಪ್ಪ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆದರೆ ಮಹಾರಾಷ್ಟçದಲ್ಲಿ ಪ್ರಬಲವಾಗಿರುವ ಶಿವಸೇನೆ ಪಕ್ಷವು ಬಾಂಬೆ ಈಶಾನ್ಯ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ಎಂ. ಕಾರ್ಯಪ್ಪ ಅವರಿಗೆ ಬೆಂಬಲ ನೀಡಿತ್ತು.

೧೯೭೦ರ ದಶಕದಲ್ಲಿ ಮಹಾರಾಷ್ಟçವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಸೇನೆಯಲ್ಲಿ ಯುದ್ಧದಲ್ಲಿ ಶತ್ರುಗಳನ್ನು ಸೋಲಿಸಿ ಗೆಲುವು ಸಾಧಿಸುತ್ತಿದ್ದ ಮೊದಲ ದಂಡನಾಯಕನನ್ನು ಮತದಾರರು ಬಾಂಬೆಯಲ್ಲಿ ಕೈ ಹಿಡಿಯಲಿಲ್ಲ. ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕೆ.ಎಂ. ಕಾರ್ಯಪ್ಪ ತೃಪ್ತಿಪಟ್ಟುಕೊಂಡಿದ್ದರು.

೧೯೭೧ರ ಲೋಕಸಭಾ ಚುನಾವಣೆಯಲ್ಲಿ ಬಾಂಬೆ ಈಶಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಾರಾಮ್ ಗೋಪಾಲ್ ಕುಲಕರ್ಣಿ ೨,೮೩,೭೯೨ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಭಾರತೀಯ ಜನಸಂಘದ ಅಭ್ಯರ್ಥಿಯಾಗಿದ್ದ ಮುಂಕುದರಾವ್ ಸುಂದರರಾವ್ ಅಗಸ್ಕರ್ ೧,೦೮,೫೧೩ ಮತಗಳನ್ನು ಪಡೆದು ಎರಡನೇ ಸ್ಥಾನವನ್ನು ಪಡೆದಿದ್ದರು.

ಕೆ.ಎಂ. ಕಾರ್ಯಪ್ಪ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಶಿವಸೇನೆ ಬೆಂಬಲ ನೀಡಿದ್ದರು ಕೂಡ ೯೦,೧೧೦ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡು ಸೋಲು ಅನುಭವಿಸಿದ್ದರು. ಆದರೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಯಾವ ಕಾರಣಕ್ಕೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು ಎಂಬುದು ಇನ್ನೂ ನಿಗೂಢ.

ಬಹುಶಃ ೧೯೭೧ ರಲ್ಲಿ ಮಂಗಳೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಸ್ಪರ್ಧಿಸಿದ್ದರೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಗೆಲುವು ಸಾಧಿಸಬಹುದಿತ್ತು ಅಲ್ವೇ...?

ಲೋಕಸಭಾ ಚುನಾವಣೆಯಲ್ಲಿ ಕೊಡಗಿನವರ ಕೈ ಹಿಡಿಯದ ಅದೃಷ್ಟ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಇದುವರೆಗೆ ಇಬ್ಬರು ಮಾತ್ರ ಲೋಕಸಭೆ ಪ್ರವೇಶಿಸಿದ್ದಾರೆ. ಸ್ವತಂತ್ರ ಲೋಕಸಭಾ ಕ್ಷೇತ್ರವನ್ನೂ ಕಳೆದುಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಮುಖಂಡರಿಗೂ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ.

ದೊಡ್ಡ ಜಿಲ್ಲೆಯ ಲೋಕಸಭಾ ಕ್ಷೇತ್ರದೊಂದಿಗೆ ವಿಲೀನಗೊಂಡಿರುವ ಕೊಡಗಿನವರು ಇಂದಿಗೂ ಕೂಡ ಕೇವಲ ವೋಟ್ ಹಾಕುವವರಾಗಿಯೇ ಉಳಿದಿದ್ದಾರೆ. ಕೊಡಗು ಪ್ರತ್ಯೇಕ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಚುನಾವಣೆಯನ್ನು ಎದುರಿಸಿದ್ದು ಒಂದು ಬಾರಿ ಮಾತ್ರ. ಆಗ ಕೊಡಗು ಪ್ರತ್ಯೇಕ ಸಿ ರಾಜ್ಯವಾಗಿತ್ತು. ರಾಜ್ಯದ ಸ್ಥಾನಮಾನ ಕಳೆದುಕೊಂಡಾಗಿನಿAದ, ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ಕೂಡ ಕೊಡಗು ಕಳೆದುಕೊಂಡಿತ್ತು.

ಕೊಡಗು ರಾಜ್ಯವಾಗಿದ್ದಾಗ ನಡೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ನಿಡ್ಯಮಲೆ ಸೋಮಣ್ಣ ಹಾಗೂ ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ವಿಲೀನಗೊಂಡ ಬಳಿಕ ಸಿ.ಎಂ. ಪೂಣಚ್ಚ ಅವರು ಒಂದು ಬಾರಿ ಗೆಲುವು ಸಾಧಿಸಿ ಕೇಂದ್ರ ಸಚಿವರಾಗಿ ಲೋಕಸಭೆ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದರು.

ನಂತರ ನಡೆದ ಎಲ್ಲಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೊಡಗಿನವರಿಗೆ ಟಿಕೆಟ್ ಕೂಡ ನಿರಾಕರಣೆ ಮಾಡುತ್ತಾ ಬರಲಾಗಿದೆ. ಕೊಡಗಿನ ಜನತೆಗೆ ತಮ್ಮ ಜಿಲ್ಲೆಯ ಅಭ್ಯರ್ಥಿಗಳಿಗೆ ಮತ ಹಾಕುವ ಭಾಗ್ಯ ದೂರವಾಗಿಯೇ ಉಳಿದುಬಿಟ್ಟಿದೆ.

೧೯೭೭ ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಿರಿಯ ವಕೀಲ ದಿವಂಗತ ಎ.ಕೆ. ಸುಬ್ಬಯ್ಯನವರು ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ವಿರುದ್ಧ ೨ ಸಾವಿರ ಮತಗಳ ಅಂತರದಿAದ ಸೋಲು ಕಂಡಿದ್ದರು.

೨೦೦೪ ರಲ್ಲಿ ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರದ ಕೊನೆಯ ಚುನಾವಣೆಯಲ್ಲಿ ಎ.ಕೆ. ಸುಬ್ಬಯ್ಯ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ವಿರುದ್ಧ ಸೋಲು ಕಂಡಿದ್ದರು.

ಕೊಡಗು ಜಿಲ್ಲೆ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ವಿಲೀನಗೊಂಡ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ೨೦೦೯ ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿ.ಎ. ಜೀವಿಜಯ ೨,೧೬,೨೮೩ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.

- ಕೆ.ಎಂ. ಇಸ್ಮಾಯಿಲ್ ಕಂಡಕರೆ