ಮಡಿಕೇರಿ, ಏ. ೨೨: ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ಅಪಘಾತವಾಗಿ ಮಹಿಳೆ ಸಾವನ್ನಪ್ಪಿದ ಪ್ರಕರಣ ಉದ್ದೇಶಪೂರ್ವಕ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಸಮಗ್ರ ತನಿಖೆಗೆ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅಬ್ದುಲ್ಲ ಅಡ್ಕರ್, ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಹಿನ್ನೆಲೆ ಮತ ಸೆಳೆಯುವ ಸಲುವಾಗಿ ವಾಲ್ನೂರು ಅಪಘಾತವನ್ನು ತಿರುಚುವ ಕೆಲಸವಾಗಿದೆ. ಅಪಘಾತವನ್ನು ಕೊಲೆ ಎಂದು ಬಿಂಬಿಸಿ ಯುವಕರನ್ನು ಕೊಲೆ ಪ್ರಕರಣದಡಿ ಬಂಧಿಸಲಾಗಿದೆ. ಅನೈತಿಕ ಪೊಲೀಸ್ಗಿರಿಗೆ ಹೆದರಿ ಕಾರು ನಿಲ್ಲಿಸದೆ ಆರೋಪಿತರು ಹೋಗಿದ್ದಾರೆ. ಈ ವಿಚಾರ ಮುಂದಿಟ್ಟು ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಪೊಲೀಸ್ ಇಲಾಖೆ ಮೇಲೆ ಒತ್ತಡ ತಂದು ಕೊಲೆ ಹಾಗೂ ಕೊಲೆಯತ್ನ ಆರೋಪದಡಿ ಐಪಿಸಿ ೩೦೨, ೩೦೭ ಸೆಕ್ಷನ್ಗಳನ್ನು ಹಾಕಿ ಇದೊಂದು ಕೊಲೆ ಎಂದು ಬಿಂಬಿಸುವ ಹುನ್ನಾರ ನಡೆದಿರುವುದು ಖಂಡನೀಯ. ಗದ್ದೆಹಳ್ಳ ಪ್ರಕರಣ ಮುಂದಿಟ್ಟು ನಾವು ಪ್ರತಿಭಟನೆ ಮಾಡಬಹುದಿತ್ತು. ತನಿಖೆಯಾಗದೆ ಕೊಲೆ ಎಂದು ಬಿಂಬಿಸಲು ನಾವು ತಯಾರಿಲ್ಲ ಎಂದು ಹೇಳಿದರು.
ಸುಂಟಿಕೊಪ್ಪ ಅಪಘಾತ ಪ್ರಕರಣ ವಾಲ್ನೂರು ಘಟನೆಗೆ ಪ್ರತೀಕಾರ ಎಂಬAತೆ ಕಾಣುತ್ತಿದೆ. ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕು. ವಾಲ್ನೂರು ಅಪಘಾತ ಪ್ರಕರಣದ ಆರೋಪಿಗಳ ವಿರುದ್ಧ ಹಾಕಿರುವ ಸುಳ್ಳು ಮೊಕದ್ದಮೆ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯಲ್ಲಿ ಎಸ್.ಪಿ. ಕಚೇರಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಎಸ್.ಡಿ.ಪಿ.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಡಿಕೇರಿ ನಗರಸಭಾ ಸದಸ್ಯ ಎಂ.ಎA. ಬಷೀರ್ ಅಹಮ್ಮದ್ ಮಾತನಾಡಿ, ಗದ್ದೆಹಳ್ಳದಲ್ಲಿ ನಡೆದ ಅಪಘಾತ ಅನುಮಾನ ಮೂಡಿಸಿದೆ. ಅಲ್ಲಿ ಅಪಘಾತ ಸಂಭವಿಸುವ ಯಾವುದೇ ಸಾಧ್ಯತೆ ಇಲ್ಲ. ಮೊನ್ನೆ ವಾಲ್ನೂರಿನಲ್ಲಿ ನಡೆದ ಘಟನೆಯ ಪ್ರತೀಕಾರವಾಗಿ ತೆಗೆದುಕೊಂಡು ಈ ರೀತಿ ಮಾಡಿರಬಹುದು ಎಂದು ಆರೋಪಿಸಿದ ಅವರು, ಈ ಪ್ರಕರಣದಲ್ಲಿ ೩೦೪ ಸೆಕ್ಷನ್ ಮಾತ್ರ ಹಾಕಲಾಗಿದೆ. ಕೊಲೆ ಪ್ರಕರಣದÀಡಿ ಎಫ್.ಐ.ಆರ್. ಮಾಡುವಂತೆ ದೂರು ನೀಡಿದರೂ ಪ್ರಕರಣ ದಾಖಲಿಸಿಲ್ಲ ಎಂದು ಆರೋಪ ಮಾಡಿದರು.
ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್ ಸುಂಟಿಕೊಪ್ಪ ಮಾತನಾಡಿ, ವಾಲ್ನೂರು ಘಟನೆಗೆ ಸಂಬAಧಿಸಿದ ಎಫ್.ಐ.ಆರ್. ರೀತಿ ಸುಂಟಿಕೊಪ್ಪ ಪ್ರಕರಣಕ್ಕೆ ಮಾಡಬೇಕಿತ್ತು. ಚಾಲಕನ ಮೇಲೆ ತೀವ್ರ ಅನುಮಾನವಿದ್ದು, ಆತನ ಮೊಬೈಲ್ ಹಾಗೂ ಹಿನ್ನೆಲೆಯನ್ನು ಪರಿಶೀಲನೆ ಮಾಡಬೇಕು. ಮೃತ ಮಹಿಳೆ ರಾಬಿಯಾ ಕುಟುಂಬಕ್ಕೆ ರೂ. ೨೫ ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಸದಸ್ಯ ರಿಜ್ವಾನ್ ಹಾಜರಿದ್ದರು.