ಸಿದ್ದಾಪುರ ಏ. ೨೦ ಹಾಸನ ಜಿಲ್ಲೆಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿದ್ದ ಹಾಗೂ ಮಾನವನ ಮೇಲೆ ದಾಳಿ ನಡೆಸಿ ಹತ್ಯೆ ಮಾಡುತ್ತಿದ್ದ ಕರಡಿ ಎಂಬ ಹೆಸರಿನ ಸಲಗವು ದುಬಾರೆ ಶಿಬಿರದ ಕ್ರಾಲಿನಲ್ಲಿ ಬಂಧಿ ಆಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹರೇಳ್ಳಿ ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿದ್ದ ಹಾಗೂ ಮಾನವನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಸಲಗವನ್ನು ಶುಕ್ರವಾರದಂದು ಸಾಕಾನೆಗಳ ನೆರವಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೆರೆ ಹಿಡಿದಿದ್ದರು. ಈ ಸಲಗವು ಬೇಲೂರು ತಾಲೂಕಿನ ವ್ಯಾಪ್ತಿಯಲ್ಲಿ ಹಲವಾರು ಮಂದಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಸಲಗವನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಶ್ರಮಪಟ್ಟು ಸಲಗವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಶುಕ್ರವಾರದಂದು ಸೆರೆಹಿಡಿದ ಅಂದಾಜು ೪೦ ವರ್ಷ ಪ್ರಾಯದ ಸಲಗವನ್ನು ಲಾರಿಯ ಮೂಲಕ ದುಬಾರೆ ಆನೆ ಶಿಬಿರಕ್ಕೆ ಕರೆತರಲಾಯಿತು. ನಂತರ ಶಿಬಿರದ ಆನೆಗಳಾದ ಪ್ರಶಾಂತ್, ಅಭಿಮನ್ಯು, ಧನಂಜಯ, ಶ್ರೀರಾಮ ಆನೆಗಳ ಸಹಕಾರದಿಂದ ಆನೆಪಳಗಿಸುವ ಕ್ರಾಲ್ನಲ್ಲಿ ಸಲಗವನ್ನು ಬಂಧಿಸಲಾಯಿತು ಹಾಸನದಲ್ಲಿ ಕರಡಿ ಬಬ್ರುವಾಹನ ಎಂದೆ ಈ ಸಲಗಕ್ಕೆ ಹೆಸರಿಡಲಾಗಿತ್ತು. ಇದೀಗ ದುಬಾರೆಯಲ್ಲಿ ಇದನ್ನು ಪಳಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಿದ್ಧತೆ ಕೈಗೊಂಡಿದ್ದಾರೆ. ನುರಿತ ಮಾವುತರು ಹಾಗೂ ಕಾವಾಡಿಗಳು ನೇಮಕವಾಗಲಿದೆ.
-ವರದಿ : ವಾಸು