ಮಡಿಕೇರಿ, ಏ. ೨೧: ವಿಶ್ವಕಲಾ ದಿನಾಚರಣೆಯ ಅಂಗವಾಗಿ ಕೊಡಗು ವಿದ್ಯಾಲಯದ ವತಿಯಿಂದ ಮಡಿಕೇರಿಯ ರಾಜಾಸೀಟಿನಲ್ಲಿ ಸಮಾಗಮ ಬೇಸಿಗೆ ಶಿಬಿರದ ಸುಮಾರು ೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಲಾ ಶಿಕ್ಷಕರಾದ ಬಿ. ಪ್ರಸನ್ನಕುಮಾರ್, ಪ್ರದೀಪ್ ಹಾಗೂ ಪವನ್ ಅವರೊಂದಿಗೆ ಸ್ಥಳದಲ್ಲಿಯೇ ಪ್ರಕೃತಿ ರಮಣೀಯ ಹಸಿರ ಸೊಬಗನ್ನು ತಮ್ಮ ಕುಂಚದಲ್ಲಿ ಅರಳಿಸುವ ಮೂಲಕ ವಿಶ್ವ ಕಲಾ ದಿನಾಚರಣೆಯನ್ನು ಆಚರಿಸಿದರು.
ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಚಿತ್ರಕಲೆ ಹವ್ಯಾಸ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಎಂದರು. ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಪ್ರಾಂಶುಪಾಲರು, ಆಡಳಿತ ನಿರ್ವಹಣಾಧಿಕಾರಿಗಳು, ಪೋಷಕ ವೃಂದದವರು, ಶಿಬಿರಾರ್ಥಿಗಳು, ಶಿಕ್ಷಕ ವೃಂದದವರು ಭಾಗವಹಿಸಿದ್ದರು.