ಮಡಿಕೇರಿ, ಏ. ೧೯: ಬಿಸಿಲಾಘಾತಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಕೆಲಕಾಲ ಮಳೆಯಾಗಿ ಇಳೆಯನ್ನು ತಂಪು ಮಾಡಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೆಲಕಾಲ ವರುಣನ ಸಿಂಚನವಾಯಿತು. ಇದರೊಂದಿಗೆ ಗೋಣಿಕೊಪ್ಪ, ಕುಶಾಲನಗರ, ನಾಪೋಕ್ಲು ಭಾಗದಲ್ಲಿಯೂ ಮಳೆಯಾಗಿದ್ದು, ಜನರಲ್ಲಿ ಸಂತಸ ಮೂಡಿದೆ.

ಕಾದು ನಿಂತಿದ್ದ ಭೂಮಿಗೆ ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಮಳೆಯಿಂದ ತಂಪು ವಾತಾವರಣ ಸೃಷ್ಟಿಯಾಯಿತು.

ಕುಶಾಲನಗರ: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ಗ್ರಾಮ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಮಳೆ ಬಿದ್ದಿದೆ.

ಕಳೆದ ಒಂದು ತಿಂಗಳ ಅವಧಿಯಿಂದ ಬಿರು ಬೇಸಿಗೆಯ ನಡುವೆ ಗುಡ್ಡೆಹೊಸೂರು: ಗುಡ್ಡೆಹೊಸೂರು ಸುತ್ತಮುತ್ತ ಅನೇಕ ಪ್ರದೇಶಗಳಲ್ಲಿ ರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ, ಗುಡ್ಡೆಹೊಸೂರಿನಲ್ಲಿ ೧.೩೦ ಇಂಚು ಮಳೆ ಸುರಿದಿದೆ. ಇದರಿಂದ ಕೆಲಕಾಲ ವಿದ್ಯುತ್ ಅಡಚಣೆಯಾಯಿತು.

ಆಲಿಕಲ್ಲು ಮಳೆ

ಕೂಡಿಗೆ: ಕೂಡಿಗೆ ಸೇರಿದಂತೆ ಹೆಬ್ಬಾಲೆ, ಮದಲಾಪುರ ಸೀಗೆಹೊಸೂರು ವ್ಯಾಪ್ತಿಯಲ್ಲಿ ವರ್ಷದ ಮೊದಲ ಮಳೆಯಾಗಿದೆ.

ಶುಕ್ರವಾರ ಸಂಜೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಯಿತು. ಹಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದವರಿಗೆ ಶುಕ್ರವಾರ ಸಂಜೆ ಸುರಿದ ಮಳೆ ತಂಪೆರೆದು ಮನಸ್ಸಿಗೆ ಸಮಾಧಾನ ತರಿಸಿತು. ದಿಢೀರ್ ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತ ಹೊಂದಿತು. ಟ್ರಾನ್ಸ್ಫಾರ್ಮರ್‌ಗಳು, ವಿದ್ಯುತ್ ಮಾರ್ಗದಲ್ಲಿ ಶಾರ್ಟ್ ಉಂಟಾಗಿ ವಿದ್ಯುತ್ ಪೂರೈಕೆ ಕಡಿತಗೊಂಡು ಅನಾನುಕೂಲ ಸೃಷ್ಟಿಯಾಯಿತು.

ಸುಂಟಿಕೊಪ್ಪ: ಸುಂಟಿಕೊಪ್ಪ ಪಟ್ಟಣಕ್ಕೆ ವರ್ಷದ ಮೊದಲ ಮಳೆಯಾಗಿದೆ. ಶುಕ್ರವಾರ ರಾತ್ರಿ ೭ ಗಂಟೆಯ ನಂತರ ಗುಡುಗು ಸಿಡಿಲಿನೊಂದಿಗೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮೊದಲ ವರ್ಷದ ಮಳೆ ಸುರಿಯಿತು. ವಿಪರೀತ ಗಾಳಿಯಿಂದ ಸುಮಾರು ಒಂದು ಗಂಟೆಯವರೆಗೆ ವಿದ್ಯುತ್ ಕಡಿತಗೊಂಡಿತ್ತು.